ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಕರ್ನಾಟಕ ಮತ್ತೆ 7 ಪದಕ ಗೆದ್ದಿದೆ. ಜಿಮ್ನಾಸ್ಟಿಕ್‌ನಲ್ಲಿ ರಾಜ್ಯದ ಸ್ಪರ್ಧಿಗಳು ಚಿನ್ನ ಸೇರಿ 4 ಪದಕಕ್ಕೆ ಕೊರಳೊಡ್ಡಿದ್ದಾರೆ. ಉಳಿದಂತೆ ಟೆನಿಸ್, ಅಥ್ಲೆಟಿಕ್ಸ್, ಸೈಕ್ಲಿಂಗ್‌ನಲ್ಲೂ ಪದಕ ಒಲಿದಿದೆ.ಜಿಮ್ನಾಸ್ಟಿಕ್‌ನ ಪುರುಷರ ಜೋಡಿ(ಆರ್ಕೊಬಾಟಿಕ್ಸ್) ವಿಭಾಗದಲ್ಲಿ ಕುತುಬುದ್ದೀನ್ ಶೇಖ್-ಕುಮಾರಸ್ವಾಮಿ ಚಿನ್ನ ಗೆದ್ದರು. ಮಿಶ್ರ ಜೋಡಿ ವಿಭಾಗದಲ್ಲಿ ಕಿರಣ್-ಪ್ರಸ್ನಾಂಜೇಯ ಕಂಚು ಜಯಿಸಿದರು. ರೋಶನ್ ದಾಸ್, ಅಮಿತ್, ನೀರಜ್, ಲುಂಗ್ತಾವೊಂಗಮ್ ಅವರನ್ನೊಳಗೊಂಡ ಪುರುಷರ ಜಿಮ್ನಾಸ್ಟಿಕ್ ತಂಡ, ಅಕ್ಷಯ, ಪ್ರಾರ್ಥನಾ, ಸೋನಿಕಾ ಇದ್ದ ಮಹಿಳಾ ತಂಡಗಳು ಕಂಚು ಪಡೆದವು.ಅಥ್ಲೆಟಿಕ್ಸ್, ಸೈಕ್ಲಿಂಗ್‌ನಲ್ಲಿ ಪದಕ: ಅಥ್ಲೆಟಿಕ್ಸ್‌ನ ಮಹಿಳೆಯರ 200 ಮೀ. ರೇಸ್‌ನಲ್ಲಿ ಉನ್ನತಿ ಅಯ್ಯಪ್ಪ 23.70 ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿ ಗೆದ್ದರು. ಮಹಿಳೆಯರ ಸೈಕ್ಲಿಂಗ್‌ನ ಎಂಟಿಬಿ ಕ್ರಾಸ್‌ಕಂಟ್ರಿ ವಿಭಾಗದಲ್ಲಿ ಸ್ಟಾರ್ ನರ್ಜಾರಿ ಬೆಳ್ಳಿ ತಮ್ಮದಾಗಿಸಿಕೊಂಡರು.
ಟೆನಿಸ್: 5 ಪದಕ ಗೆದ್ದು 3ನೇ ಸ್ಥಾನಟೆನಿಸ್ನಲ್ಲಿ ಕರ್ನಾಟಕ ತಂಡ ಕೂಟದಲ್ಲಿ 5 ಪದಕಗಳೊಂದಿಗೆ 3ನೇ ಸ್ಥಾನಿಯಾಯಿತು. ಮಂಗಳವಾರ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ನಿಕಿ ಪೂಣಚ್ಚ-ಸೋಹಾ ಸಾದಿಕ್ ಜೋಡಿ ತಮಿಳುನಾಡಿನ ಲೋಹಿತ್-ಲಕ್ಷ್ಮಿಪ್ರಭ ವಿರುದ್ಧ ಸೋಲನುಭವಿಸಿದರು. ಟೆನಿಸ್‌ನಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದಿದೆ.