ಸಾರಾಂಶ
ಈಜು ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಕರ್ನಾಟಕ 6 ಚಿನ್ನ ಸೇರಿ 9 ಪದಕ ಗೆದ್ದಿದೆ. ಮಹಿಳೆಯರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಹಶಿಕಾ 4 ನಿಮಿಷ 24.70 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.
ಮಂಗಳೂರು : 77ನೇ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ ಮೊದಲ ದಿನವೇ ಕರ್ನಾಟಕ 6 ಚಿನ್ನ ಸೇರಿ 9 ಪದಕ ಗೆದ್ದಿದೆ. ಹಶಿಕಾ ರಾಮಚಂದ್ರ 13 ವರ್ಷ ಹಳೆಯ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.
ಮಂಗಳವಾರ ಮಹಿಳೆಯರ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಹಶಿಕಾ 4 ನಿಮಿಷ 24.70 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಮೂಲಕ 2011ರಲ್ಲಿ ರಾಂಚಿಯಲ್ಲಿ ರಿಚಾ ಮಿಶ್ರಾ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ(4 ನಿಮಿಷ 25.76 ಸೆಕೆಂಡ್)ಯನ್ನು ಅಳಿಸಿ ಹಾಕಿದರು.
ಪುರುಷರ 400 ಮೀ. ಫ್ರೀಸ್ಟೈಲ್‌ನಲ್ಲಿ ಅನೀಶ್ ಗೌಡ 3 ನಿಮಿಷ 56.59 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ರಾಜ್ಯದವರೇ ಆದ ದರ್ಶನ್ ಎಸ್.(4 ನಿಮಿಷ 01.39 ಸೆ.) ಬೆಳ್ಳಿ ಜಯಿಸಿದರು. ಪುರುಷರ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ರಾಜ್ಯದ ಮಣಿಕಂಠ(2 ನಿಮಿಷ 20.66 ಸೆ.) ಬೆಳ್ಳಿ, ಮಹಿಳೆಯರ ವಿಭಾಗದಲ್ಲಿ ತಾನ್ಯಾ ಷಡಕ್ಷರಿ(2 ನಿಮಿಷ 40.54 ಸೆ.) ಚಿನ್ನ ಗೆದ್ದರು.
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್‌ಮಣಿ ಚಿನ್ನ, ಮಹಿಳೆಯರ 50 ಮೀ. ಬಟರ್‌ಫ್ಲೈನಲ್ಲಿ ಮಾನವಿ ವರ್ಮಾ ಬೆಳ್ಳಿ ಗೆದ್ದರು.ಮಹಿಳೆಯರ 4*200 ಮೀ. ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಶಿರಿನ್, ಶಾಲಿನಿ, ನೈಶಾ, ಹಶಿಕಾ ಅವರನ್ನೊಳಗೊಂಡ ರಾಜ್ಯ ತಂಡ ಚಿನ್ನ ಜಯಿಸಿತು. ಪುರುಷರ ವಿಭಾಗದಲ್ಲಿ ಅನೀಶ್, ದರ್ಶನ್, ಕಾರ್ತಿಕೇಯ, ದಕ್ಷಣ್ ಇದ್ದ ರಾಜ್ಯ ತಂಡಕ್ಕೆ ಬಂಗಾರ ಲಭಿಸಿತು.