ರಾಷ್ಟ್ರೀಯ ಜಂಪ್ಸ್‌ ಕೂಟ: ಹೈಜಂಪ್‌ನಲ್ಲಿ ರಾಜ್ಯದ ಸಂದೇಶ್‌ಗೆ ಚಿನ್ನ

| Published : Mar 21 2024, 01:00 AM IST

ಸಾರಾಂಶ

ಬೆಂಗಳೂರಿನ ಅಂಜು ಜಾರ್ಜ್‌ ಅಕಾಡೆಮಿಯಲ್ಲಿ 3ನೇ ರಾಷ್ಟ್ರೀಯ ಜಂಪ್ಸ್‌ ಕೂಟ. ಪೋಲ್‌ ವಾಲ್ಟ್‌ನಲ್ಲಿ ಕರ್ನಾಟಕದ ಸಿಂಧುಶ್ರೀಗೆ ಕಂಚಿನ ಪದಕ. 2 ಪದಕದೊಂದಿಗೆ ರಾಜ್ಯದ ಅಭಿಯಾನ ಅಂತ್ಯ

ಕನ್ನಡಪ್ರಭ ವಾರ್ತೆ ಬೆಂಗಳೂರು

3ನೇ ರಾಷ್ಟ್ರೀಯ ಜಂಪ್ಸ್‌ ಕೂಟದಲ್ಲಿ ಕರ್ನಾಟಕ ಅಥ್ಲೀಟ್‌ಗಳು 1 ಚಿನ್ನ ಸೇರಿದಂತೆ 2 ಪದಕಗಳನ್ನು ಬಾಚಿಕೊಂಡಿದ್ದಾರೆ. ಬುಧವಾರ ನಗರದ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ ನಡೆದ ಕೂಟದಲ್ಲಿ ಹೈಜಂಪ್‌ನಲ್ಲಿ ಜೆಸ್ಸಿ ಸಂದೇಶ್‌ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಸಂದೇಶ್‌ 2.20 ಮೀ. ಎತ್ತರಕ್ಕೆ ನೆಗೆದು ಅಗ್ರಸ್ಥಾನ ಪಡೆದರು. ಅವರಿಗೆ ತೀವ್ರ ಪೈಪೋಟಿ ನೀಡಿದ ತಮಿಳುನಾಡಿನ ಆದರ್ಶ್‌ ರಾಮ್‌ ಹಾಗೂ ಒಡಿಶಾದ ಸ್ವಾಧಿನ್‌ ಕುಮಾರ್‌ ತಲಾ 2.10 ಮೀ. ಎತ್ತರಕ್ಕೆ ನೆಗೆದು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದರು.

ಇನ್ನು, ಮಹಿಳೆಯರ ಪೋಲ್‌ ವಾಲ್ಟ್‌ನಲ್ಲಿ ಕರ್ನಾಟಕದ ಸಿಂಧುಶ್ರೀ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅವರು 3.80 ಮೀ. ಎತರಕ್ಕೆ ನೆಗೆದರೆ, 4.15 ಮೀ. ಎತ್ತರ ದಾಖಲಿಸಿದ ತಮಿಳುನಾಡಿನ ಪವಿತ್ರಾ ವೆಂಕಟೇಶ್‌ ಚಿನ್ನ, 3.80 ಮೀ. ಎತ್ತರಕ್ಕೆ ನೆಗೆದ ಕೇರಳದ ಮರಿಯಾ ಜೈಸನ್‌ ಬೆಳ್ಳಿ ಗೆದ್ದರು.

ಕೂಟದಲ್ಲಿ ಪುರುಷ, ಮಹಿಳಾ ವಿಭಾಗಗಳಿಗೆ ಹೈ ಜಂಪ್‌, ಲಾಂಗ್‌ಜಂಪ್‌, ಪೋಲ್‌ ವಾಲ್ಟ್‌, ಟ್ರಿಪಲ್‌ ಜಂಪ್‌ ಸ್ಪರ್ಧೆಗಳನ್ನು ನಡೆಸಲಾಯಿತು. ಕೇರಳ ಹಾಗೂ ತಮಿಳುನಾಡಿನ ಸ್ಪರ್ಧಿಗಳು ಪ್ರಾಬಲ್ಯ ಸಾಧಿಸಿದರು. ಕೇರಳ 4 ಚಿನ್ನ, 2 ಬೆಳ್ಳಿ, 1 ಕಂಚು ಗೆದ್ದರೆ, ತಮಿಳುನಾಡಿನ ಅಥ್ಲೀಟ್‌ಗಳು 2 ಚಿನ್ನ, 3 ಬೆಳ್ಳಿ ತಮ್ಮದಾಗಿಸಿಕೊಂಡರು.