ಸಾರಾಂಶ
ನವದೆಹಲಿ: 2017ರ ಬಳಿಕ ಭಾರತ ತಂಡದಿಂದ ಹೊರಬಿದ್ದಿರುವ ತಾರಾ ಕ್ರಿಕೆಟಿಗ ಕರುಣ್ ನಾಯರ್ ಈಗ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸುವ ಮೂಲಕ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಕರ್ನಾಟಕ ತೊರೆದು ವಿದರ್ಭ ತಂಡ ಸೇರ್ಪಡೆಗೊಂಡಿರುವ 33 ವರ್ಷದ ಕರುಣ್, ಈ ಬಾರಿ ವಿಜಯ್ ಹಜಾರೆಯಲ್ಲಿ ಮಿಂಚುತ್ತಿದ್ದು, ಆಯ್ಕೆ ಸಮಿತಿಯ ಗಮನ ಸೆಳೆಯುತ್ತಿದ್ದಾರೆ.
ಕರುಣ್ 2016ರಲ್ಲಿ ತಮ್ಮ 3ನೇ ಟೆಸ್ಟ್‌ನಲ್ಲೇ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದರು. ಆದರೆ ವಿಪರ್ಯಾಸವೆಂಬಂತೆ ಮುಂದಿನ ಟೆಸ್ಟ್‌ನಲ್ಲಿ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. 2017ರಲ್ಲಿ ಮತ್ತೆ 3 ಟೆಸ್ಟ್‌ಗೆ ಕರುಣ್ ಆಯ್ಕೆಯಾಗಿದ್ದರು. ಆದರೆ ಮಿಂಚಲಿಲ್ಲ. ಇದರೊಂದಿಗೆ ತಂಡದಿಂದಲೇ ಹೊರಬೀಳುವಂತಾಯಿತು.
2022ರಲ್ಲಿ ‘ಡಿಯರ್ ಕ್ರಿಕೆಟ್....ಮತ್ತೊಂದು ಅವಕಾಶ ಕೊಡು’ ಎಂದು ಟ್ವೀಟ್ ಮಾಡಿದ್ದ ಕರುಣ್, 2023-24ರಲ್ಲಿ ವಿದರ್ಭ ಪರ ರಣಜಿ ಕ್ರಿಕೆಟ್‌ನಲ್ಲಿ 10 ಪಂದ್ಯಗಳಲ್ಲಿ 690 ರನ್ ಕಲೆಹಾಕಿದ್ದರು. ಈ ನಡುವೆ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನ ನಾರ್ಥಾಂಪ್ಟನ್‌ಶೈರ್ ಪರ ದ್ವಿಶತಕ, ಶತಕ ಬಾರಿಸಿಯೂ ಗಮನ ಸೆಳೆದರು.
ಈ ವರ್ಷ ವಿಜಯ್ ಹಜಾರೆಯಲ್ಲಂತೂ ಕರುಣ್ ಅಭೂತಪೂರ್ವ ಲಯದಲ್ಲಿದ್ದು, ಆಡಿದ 6 ಇನ್ನಿಂಗ್ಸ್‌ಗಳ ಪೈಕಿ ಸತತ 4 ಸೇರಿ ಒಟ್ಟು 5 ಶತಕ ಬಾರಿಸಿದ್ದಾರೆ. 5 ಪಂದ್ಯಗಳಲ್ಲಿ ಔಟಾಗದೆ 542 ರನ್ ಸಿಡಿಸಿದ್ದ ಅವರು, ಲಿಸ್ಟ್ ‘ಎ’ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯನ್ನೇ ಬರೆದಿದ್ದಾರೆ.ಕರುಣ್ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿದ್ದರೂ ರಾಷ್ಟ್ರೀಯ ತಂಡಕ್ಕೆ ಅವರನ್ನು ಪರಿಗಣಿಸಲಾಗುತ್ತದೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ತಮಗೆ ಈಗ 33 ವರ್ಷವಾಗಿದ್ದರೂ, ಭಾರತ ತಂಡಕ್ಕೆ ಮರಳುವ ವಿಶ್ವಾಸವನ್ನು ಕರುಣ್ ಕಳೆದುಕೊಂಡಿಲ್ಲ.