ಸಾರಾಂಶ
ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 3,442.32 ಕೋಟಿ ರು. ಮೀಸಲಿಟ್ಟಿದೆ. ಇದು ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚು. ಈ ಹಿಂದಿನ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 3,396.96 ಕೋಟಿ ರು. ನೀಡಲಾಗಿತ್ತು.ಒಲಿಂಪಿಕ್ಸ್ ಆಗಸ್ಟ್‌ನಲ್ಲಿ ಮುಗಿಯಲಿದ್ದು, ಮುಂದಿನ 2 ವರ್ಷ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ಕೂಡಾ ಇಲ್ಲ. ಹೀಗಾಗಿ ಈ ವರ್ಷ ಕಳೆದ ಬಾರಿಗಿಂತ ಕೇವಲ ₹45.36 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.
ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಯೋಜನೆಗೆ 900 ಕೋಟಿ ರು. ಅನುದಾನ ಘೋಷಿಸಲಾಗಿದೆ. ಕಳೆದ ಬಾರಿ ₹880 ಕೋಟಿ ನೀಡಿದ್ದು, ಈ ಬಾರಿ 20 ಕೋಟಿ ಹೆಚ್ಚುವರಿಯಾಗಿ ನೀಡಲಾಗಿದೆ.
ರಾಷ್ಟ್ರೀಯ ಕ್ರೀಡಾ ಫೆಡರೇಷನ್(ಎನ್‌ಎಸ್ಎಫ್)ಗೆ ₹340 ಕೋಟಿ, ಭಾರತ ಕ್ರೀಡಾ ಪ್ರಾಧಿಕಾರ(ಸಾಯ್)ಕ್ಕೆ ₹822.60 ಕೋಟಿ ಮೀಸಲಿಡಲಾಗಿದೆ. ಸಾಯ್‌ಗೆ ಕಳೆದ ಬಾರಿ ₹795.77 ಕೋಟಿ ನೀಡಲಾಗಿದ್ದು, ಈ ಸಲ ₹26.83 ಕೋಟಿ ಹೆಚ್ಚಿಸಲಾಗಿದೆ. ಇನ್ನು, ರಾಷ್ಟ್ರೀಯ ಡೋಪಿಂಗ್ ನಿಗ್ರಹ ಘಟಕ(ನಾಡಾ)ಕ್ಕೆ ₹22.30 ಕೋಟಿ ಹಾಗೂ ರಾಷ್ಟ್ರೀಯ ಡೋಪಿಂಗ್ ಪರೀಕ್ಷೆ ಲ್ಯಾಬೊರೇಟರಿ(ಎನ್‌ಡಿಟಿಲ್)ಗೆ ₹22 ಕೋಟಿ ರು. ಮೀಸಲಿಡಲಾಗಿದೆ.