ಸಾರಾಂಶ
ನವದೆಹಲಿ: ಸರಿಯಾಗಿ ಬೆಳಗ್ಗೆ 9 ಗಂಟೆಗೆ ಕಪ್ಪು ಬಣ್ಣದ ಪೊರ್ಶೆ ಕಾರು ಅರುಣ್ ಜೇಟ್ಲಿ ಕ್ರೀಡಾಂಗಣದ ಆವರಣ ಪ್ರವೇಶಿಸುತ್ತಿದ್ದಂತೆ, ಕ್ರೀಡಾಂಗಣದಲ್ಲಿದ್ದ ಎಲ್ಲರ ಕಣ್ಣು ಕಾರಿನ ಮೇಲೆ ಬಿತ್ತು. ಎಲ್ಲರೂ ಆ ಕಾರಿನತ್ತ ನೋಡಿದ್ದು, ಅದು ಚೆನ್ನಾಗಿದೆ ಎನ್ನುವ ಕಾರಣಕ್ಕಲ್ಲ. ಬದಲಿಗೆ ಆ ಕಾರಿನಿಂದ ಕೆಳಗಿಳಿದಿದ್ದು ವಿರಾಟ್ ಕೊಹ್ಲಿ. 12 ವರ್ಷ ಬಳಿಕ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲಿರುವ ಕೊಹ್ಲಿ, ಮಂಗಳವಾರ ದೆಹಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದರು. ವೇಗಿ ನವ್‌ದೀಪ್ ಸೈನಿ ಹೊರತುಪಡಿಸಿ ದೆಹಲಿ ತಂಡದಲ್ಲಿರುವ ಇನ್ನುಳಿದ ಎಲ್ಲಾ ಆಟಗಾರರು ಕೊಹ್ಲಿಗೆ ಹೊಸ ಮುಖಗಳೇ. ಆಯುಷ್ ಬದೋನಿ ಸೇರಿ ಕೆಲವರು ಐಪಿಎಲ್‌ನಲ್ಲಿ ಕೊಹ್ಲಿ ವಿರುದ್ಧ ಆಡಿದ್ದಾರೆ. ಆದರೂ, ತಾವೊಬ್ಬ ‘ಸೂಪರ್ ಸ್ಟಾರ್’ ಎನ್ನುವ ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೂ ಬೆರೆತು ಕೊಹ್ಲಿ ಅಭ್ಯಾಸದಲ್ಲಿ ಪಾಲ್ಗೊಂಡರು.
ಮೊದಲು 45 ನಿಮಿಷ ಕಾಲ ವಾರ್ಮ್ ಅಪ್ ಮಾಡಿದ ಕೊಹ್ಲಿ, 15 ನಿಮಿಷ ಫುಟ್ಬಾಲ್ ಆಡಿದರು. ಆನಂತರ 1 ಗಂಟೆಗೂ ಹೆಚ್ಚು ಕಾಲ ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದರು.ಕೊಹ್ಲಿಗೆ ಇಷ್ಟ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಪೂರಿ, ಚೋಲೆ ತರಿಸಿದ್ದರಂತೆ. ಆದರೆ ಎಣ್ಣೆಯ ಪದಾರ್ಥ ಎನ್ನುವ ಕಾರಣಕ್ಕೆ ಅದನ್ನು ಸೇವಿಸಲಿಲ್ಲ. ಅಭ್ಯಾಸ ಬಳಿಕ ಎಲ್ಲರ ಜೊತೆ ಕೂತು ಊಟ ಮಾಡಿ ಆ ಬಳಿಕ ಮನೆಗೆ ಹೊರಟರು ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ. ನಾಯಕತ್ವ ಬೇಡ ಎಂದ ಕೊಹ್ಲಿ!
ಜ.30ರಿಂದ ರೈಲ್ವೇಸ್ ತಂಡವನ್ನು ಮುನ್ನಡೆಸುವಂತೆ ದೆಹಲಿ ಕ್ರಿಕೆಟ್ ಸಂಸ್ಥೆ ಕೊಹ್ಲಿಯನ್ನು ಕೇಳಿತಂತೆ. ಆದರೆ ಯುವ ಆಟಗಾರ ಬದೋನಿ ನಾಯಕತ್ವದಲ್ಲಿ ತಮಗೆ ಆಡಲು ಯಾವುದೇ ಮುಜುಗರವಿಲ್ಲ ಎಂದು ಕೊಹ್ಲಿ ತಿಳಿಸಿದ್ದಾಗಿ ಗೊತ್ತಾಗಿದೆ.