ಕನ್ನಡಿಗ ಮಯಾಂಕ್‌ ಅಗರ್‌ವಾಲ್‌ ಅವರ ವಿಕೆಟ್‌ ಪಡೆದಾಗ ಹರ್ಷಿತ್‌ ರಾಣಾ ಫ್ಲೈಯಿಂಗ್‌ ಕಿಸ್‌ ಕೊಟ್ಟು ಕೆಣಕಿದ್ದರು. ಇದು ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಕಾರಣವಾಗಿತ್ತು.

ಕೋಲ್ಕತಾ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ ಕೋಲ್ಕತಾ ನೈಟ್‌ರೈಡರ್ಸ್‌ ತಂಡದ ವೇಗಿ ಹರ್ಷಿತ್‌ ರಾಣಾಗೆ ಐಪಿಎಲ್‌ ಆಡಳಿತ ಮಂಡಳಿ ಪಂದ್ಯದ ಸಂಭಾವನೆಯ ಶೇ.60ರಷ್ಟು ದಂಡ ವಿಧಿಸಿದೆ. 

ಪಂದ್ಯದಲ್ಲಿ 2 ಬಾರಿ ಹರ್ಷಿತ್‌ ನಿಯಮ ಉಲ್ಲಂಘಿಸಿದ್ದಾಗಿ ಅಂಪೈರ್‌ಗಳು ರೆಫ್ರಿಗೆ ದೂರಿದ ಕಾರಣ, ದೊಡ್ಡ ಪ್ರಮಾಣದ ದಂಡ ಹಾಕಲಾಗಿದೆ.

ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಮಯಾಂಕ್‌ರ ವಿಕೆಟ್‌ ಪಡೆದಾಗ ಹರ್ಷಿತ್‌ ಫ್ಲೈಯಿಂಗ್‌ ಕಿಸ್‌ ಕೊಟ್ಟು ಕೆಣಕಿದ್ದರು. ಇದು ಸಾಮಾಜಿಕ ತಾಣಗಳಲ್ಲಿ ಟೀಕೆಗೆ ಕಾರಣವಾಗಿತ್ತು. ಆದರೆ ಪಂದ್ಯದ ಕೊನೆ ಓವರಲ್ಲಿ ಹರ್ಷಿತ್‌ ರಾಣಾ ಶಿಸ್ತುಬದ್ಧ ದಾಳಿ ಸಂಘಟಿಸಿ ಕೋಲ್ಕತಾಗೆ ಗೆಲುವು ತಂದುಕೊಟ್ಟಿದ್ದರು. 

ಮೊದಲು ಬ್ಯಾಟಿಂಗ್‌ ಮಾಡಿದ್ದ ಕೋಲ್ಕತಾ ತಂಡ ನಿಗದಿತ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 208 ರನ್​ ಗಳಿಸಿತ್ತು. ಬೃಹತ್‌ ಗುರಿ ಬೆನ್ನತ್ತಿದ ಹೈದರಾಬಾದ್‌ ಕ್ಲಾಸೆನ್‌ ಸಾಹಸದ ಹೊರತಾಗಿಯೂ 7 ವಿಕೆಟ್‌ಗೆ 204 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. 

16 ಓವರಲ್ಲಿ 133 ರನ್ ಗಳಿಸಿದ್ದ ತಂಡಕ್ಕೆ ಕೊನೆ 4 ಓವರಲ್ಲಿ 76 ರನ್‌ ಬೇಕಿತ್ತು. ಆ್ಯಂಡ್ರೆ ರಸೆಲ್‌ 16, ವರುಣ್‌ ಚಕ್ರವರ್ತಿ 21, ಮಿಚೆಲ್‌ ಸ್ಟಾರ್ಕ್‌ 26 ರನ್‌ ಚಚ್ಚಿಸಿಕೊಂಡರು. 

ಆದರೆ ಕೊನೆ ಓವರಲ್ಲಿ 13 ರನ್‌ ಬೇಕಿದ್ದಾಗ ಹರ್ಷಿತ್ ರಾಣಾ ಮ್ಯಾಜಿಕ್‌ ಮಾಡಿದ್ದರು. ಕ್ಲಾಸೆನ್‌, ಶಾಬಾಜ್‌ ಇಬ್ಬರನ್ನೂ ಔಟ್‌ ಮಾಡಿದರು. ಕೊನೆ ಎಸೆತಕ್ಕೆ 5 ರನ್‌ ಬೇಕಿದ್ದಾಗ ಕಮಿನ್ಸ್‌ ಸಿಕ್ಸರ್‌ ಸಿಡಿಸಲು ವಿಫಲರಾದರು. ಕೋಲ್ಕತಾ ಗೆದ್ದು ಬೀಗಿತು.