ಸಾರಾಂಶ
ಪರ್ತ್: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್.ರಾಹುಲ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ.
ಶುಕ್ರವಾರ ಅಭ್ಯಾಸ ಪಂದ್ಯದದಲ್ಲಿ ಬ್ಯಾಟಿಂಗ್ ವೇಳೆ ಪ್ರಸಿದ್ಧ್ ಕೃಷ್ಣ ಎಸೆದ ಚೆಂಡು ರಾಹುಲ್ ಕೈಗೆ ಬಡಿದಿದೆ. ಅವರನ್ನು ಮೈದಾನದಲ್ಲೇ ವೈದ್ಯಕೀಯ ಸಿಬ್ಬಂದಿ ಉಪಚರಿಸಿದರೂ, ನೋವು ಕಡಿಮೆಯಾಗದ ಕಾರಣ ಅಭ್ಯಾಸ ಮೊಟಕುಗೊಳಿಸಿ ಮೈದಾನದಿಂದ ಹೊರನಡೆದಿದ್ದಾರೆ. ಅವರ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಕೊಹ್ಲಿಗೆ ಸ್ಕ್ಯಾನ್: ಕಾರಣ ನಿಗೂಢ!
ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಗುರುವಾರ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ. ಅದರೆ ಸ್ಕ್ಯಾನ್‌ಗೆ ಕಾರಣ ನಿಗೂಢವಾಗಿ ಉಳಿದಿದೆ. ಸ್ಕ್ಯಾನ್‌ಗೆ ಒಳಗಾದ ಹೊರತಾಗಿಯೂ ಕೊಹ್ಲಿ ಫಿಟ್ ಇದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದು, ಮೊದಲ ಟೆಸ್ಟ್‌ಗೆ ಲಭ್ಯವಿದ್ದಾರೆ ಎಂದು ವರದಿಯಾಗಿದೆ. ನ.22ರಿಂದ ಪರ್ತ್‌ನಲ್ಲಿ ಪ್ರಥಮ ಟೆಸ್ಟ್ ಆರಂಭಗೊಳ್ಳಲಿದೆ.
ಮುಷ್ತಾಕ್ ಅಲಿ ಟಿ20 : ರಾಜ್ಯ ತಂಡಕ್ಕೆ ಮನ್ವಂತ್ ಆಯ್ಕೆ
ಬೆಂಗಳೂರು: ನ.23ರಿಂದ ಡಿ.5 ರ ವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಗುಂಪು ಹಂತದ ಪಂದ್ಯಗಳಿಗೆ 15 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಮಯಾಂಕ್ ಅಗರ್‌ವಾಲ್ ತಂಡದ ನಾಯಕತ್ವ ವಹಿಸಲಿದ್ದು, ಮಹಾರಾಜ ಟ್ರೋಫಿ ಲೀಗ್‌ನಲ್ಲಿ ಗಮನ ಸೆಳೆದಿದ್ದ ಯುವ ಆಲ್ರೌಂಡರ್ ಮನ್ವಂತ್ ಕುಮಾರ್‌ಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಅನುಭವಿಗಳಾದ ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಕೂಡಾ ತಂಡದಲ್ಲಿದ್ದಾರೆ.ತಂಡ: ಮಯಾಂಕ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್, ಸ್ಮರಣ್ ಆರ್., ಕೃಷ್ಣನ್ ಶ್ರೀಜಿತ್, ವೈಶಾಖ್, ಮ್ಯಾಕ್ನೀಲ್, ಕೌಶಿಕ್, ಮನೋಜ್ ಭಾಂಡಗೆ, ವಿದ್ಯಾಧರ್ ಪಾಟೀಲ್, ಎಲ್.ಆರ್.ಚೇತನ್, ಶುಭಾಂಗ್ ಹೆಗಡೆ, ಮನ್ವಂತ್ ಕುಮಾರ್.