ಸಾರಾಂಶ
ಪ್ಯಾರಿಸ್: 2024ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಈಗಾಗಲೇ 2 ಕಂಚಿನ ಪದಕ ಗೆದ್ದಿರುವ ಭಾರತ, ಗುರುವಾರ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನಿಲ್ ಕುಶಾಲೆ ಫೈನಲ್ ಪ್ರವೇಶಿಸಿದ್ದು, ಗುರುವಾರ ಪದಕ ಸುತ್ತು ನಡೆಯಲಿದೆಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ಸ್ವಪ್ನಿಲ್ 7ನೇ ಸ್ಥಾನ ಪಡೆದರು. ಆದರೆ 11ನೇ ಸ್ಥಾನ ಪಡೆದ ಐಶ್ವರಿ ಪ್ರತಾಪ್ ತೋಮರ್ ಫೈನಲ್ ಪ್ರವೇಶಿಸಲು ವಿಫಲರಾದರು. ಒಟ್ಟು 44 ಶೂಟರ್‌ಗಳ ಪೈಕಿ ಅಗ್ರ-8 ಸ್ಥಾನ ಪಡೆದವರು ಫೈನಲ್‌ಗೇರಿದರು.
ಸ್ವಪ್ನಿಲ್ ಮಂಡಿಯೂರಿ ಶೂಟ್ ಮಾಡುವ ವಿಭಾಗದಲ್ಲಿ 198 (99, 99), ಪ್ರೋನ್ ಅಂದರೆ ನೆಲದ ಮೇಲೆ ಮಲಗಿ ಶೂಟ್ ಮಾಡುವ ವಿಭಾಗದಲ್ಲಿ 197 (98, 99) ಹಾಗೂ ನಿಂತುಕೊಂಡು ಶೂಟ್ ಮಾಡುವ ವಿಭಾಗದಲ್ಲಿ 195 (98, 97) ಅಂಕಗಳನ್ನು ಪಡೆದರು. ಒಟ್ಟಾರೆ ಸ್ವಪ್ನಿಲ್ 590 ಅಂಕ ಪಡೆದರೆ, ತೋಮರ್ 589 ಅಂಕ ಗಳಿಸಿ ಫೈನಲ್ ಸ್ಥಾನದಿಂದ ವಂಚಿತರಾದರು.ಕಳೆದ ವರ್ಷ ಏಷ್ಯನ್ ಗೇಮ್ಸ್‌ನ 50 ಮೀ. ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್, ಐಶ್ವರಿ ತೋಮರ್ ಹಾಗೂ ಅಖಿಲ್ ಶೆರೊನ್ ಚಿನ್ನ ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ಸ್ವಪ್ನಿಲ್ 4ನೇ ಸ್ಥಾನ ಪಡೆದಿದ್ದರು.