ಕಿರಿಯರಿಗೆ ಕೋಚ್‌ ಆಗಲು ದ್ರಾವಿಡ್‌ ಸ್ಫೂರ್ತಿ: ಶ್ರೀಜೇಶ್‌

| Published : Aug 14 2024, 12:51 AM IST

ಸಾರಾಂಶ

ರಾಹುಲ್‌ ದ್ರಾವಿಡ್‌ ಮೊದಲು ಅಂಡರ್‌-19 ತಂಡದ ಕೋಚ್‌ ಆಗಿದ್ದರು. ಅವರಂತೆಯೇ ಯುವ ಪೀಳಿಗೆಯನ್ನು ಸಿದ್ಧಗೊಳಿಸುವುದು ನನ್ನ ಗುರಿ ಎಂದ ಶ್ರೀಜೇಶ್‌. ಕಿರಿಯರ ತಂಡದ ಕೋಚ್‌ ಆಗಿ ಶ್ರೀಜೇಶ್‌ರನ್ನು ನೇಮಿಸಿರುವ ಹಾಕಿ ಇಂಡಿಯಾ.

ನವದೆಹಲಿ: ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಹುದ್ದೆ ಒಪ್ಪಿಕೊಳ್ಳಲು ತಮಗೆ ರಾಹುಲ್‌ ದ್ರಾವಿಡ್‌ ಸ್ಫೂರ್ತಿ ಎಂದು ಭಾರತದ ಮಾಜಿ ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್‌ ಹೇಳಿಕೊಂಡಿದ್ದಾರೆ. ಒಲಿಂಪಿಕ್ಸ್‌ ಬಳಿಕ ನಿವೃತ್ತಿ ಪಡೆದ ಶ್ರೀಜೇಶ್‌ರನ್ನು ಕಿರಿಯರ ಹಾಕಿ ತಂಡದ ಕೋಚ್‌ ಆಗಿ ನೇಮಿಸುವುದಾಗಿ ಹಾಕಿ ಇಂಡಿಯಾ ಘೋಷಿಸಿತ್ತು. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಶ್ರೀಜೇಶ್‌ ತಮ್ಮ ಮುಂದಿರುವ ಗುರಿ ಬಗ್ಗೆ ವಿವರಿಸಿದ್ದಾರೆ. ‘ದ್ರಾವಿಡ್‌ ಭಾರತ ಹಿರಿಯರ ತಂಡದ ಕೋಚ್‌ ಆಗುವ ಮೊದಲು ಅಂಡರ್‌-19 ತಂಡದೊಂದಿಗೆ ಕೆಲಸ ಮಾಡಿದ್ದರು. ಅಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ಆಟಗಾರರನ್ನು ಹಿರಿಯರ ತಂಡಕ್ಕೆ ತಂದರು. ಅದೇ ರೀತಿ ನಾನು ಸಹ ಮೊದಲು ಕಿರಿಯರ ತಂಡದಲ್ಲಿ ಕೆಲಸ ಮಾಡಿ, ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲು ಇಚ್ಛಿಸುತ್ತೇನೆ’ ಎಂದಿದ್ದಾರೆ.

‘2032ರ ವೇಳೆಗೆ ಭಾರತ ಹಿರಿಯರ ತಂಡದ ಪ್ರಧಾನ ಕೋಚ್‌ ಹುದ್ದೆ ಅಲಂಕರಿಸಲು ನಾನು ಸಿದ್ಧನಿರುತ್ತೇನೆ. 2036ರಲ್ಲಿ ಭಾರತ ಒಲಿಂಪಿಕ್ಸ್‌ ಆಯೋಜಿಸಿದರೆ, ಆಗ ನಾನು ತಂಡದ ಕೋಚ್‌ ಆಗಿರಬೇಕು ಎನ್ನುವುದು ನನ್ನ ಆಸೆ’ ಎಂದು ಶ್ರೀಜೇಶ್‌ ಹೇಳಿಕೊಂಡಿದ್ದಾರೆ.