ಮಂಗಳೂರು ವಿವಿ ಅಂತರ್‌ ಕಾಲೇಜು ಫುಟ್ಬಾಲ್‌ : ಟಿಪ್ಪು ಸುಲ್ತಾನ್‌ ಕಾಲೇಜ್ ಚಾಂಪಿಯನ್‌

| Published : Nov 08 2024, 12:34 AM IST / Updated: Nov 08 2024, 04:18 AM IST

ಸಾರಾಂಶ

ಫೈನಲ್‌ ಹಣಾಹಣಿಯಲ್ಲಿ ಪಿಎ ಕಾಲೇಜ್‌ ವಿರುದ್ಧ ಟಿಪ್ಪು ಸುಲ್ತಾನ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಫುಟ್ಬಾಲ್ ಪಂದ್ಯಾವಳಿಯಲ್ಲಿ ಉಳ್ಳಾಲದ ಟಿಪ್ಪು ಸುಲ್ತಾನ್ ಕಾಲೇಜ್‌ ತಂಡ ಮಂಗಳೂರು ಝೋನ್‌ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಕಾಲೇಜಿನ ಮೂರು ದಶಕಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದೆ. ಒಟ್ಟು 29 ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಟಿಪ್ಪು ಸುಲ್ತಾನ್‌ ತಂಡ ಸೆಮಿಫೈನಲ್‌ನಲ್ಲಿ ಮಂಗಳೂರಿನ ರೋಶನಿ ನಿಲಯ ವಿರುದ್ಧ 1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಎಂಯು ಕ್ಯಾಂಪಸ್‌ ತಂಡದ ವಿರುದ್ಧ ಪಿಎ ಕಾಲೇಜ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲಿನಿಂದ ಜಯಭೇರಿ ಬಾರಿಸಿತು.ಬಳಿಕ ನಡೆದ ಫೈನಲ್‌ ಹಣಾಹಣಿಯಲ್ಲಿ ಪಿಎ ಕಾಲೇಜ್‌ ವಿರುದ್ಧ ಟಿಪ್ಪು ಸುಲ್ತಾನ್‌ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಟಿಪ್ಪು ಸುಲ್ತಾನ್ ಪದವಿ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜ್‌ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ‘ಟೂರ್ನಿಯಲ್ಲಿ ಚಾಂಪಿಯನ್‌ ಆಗಿರುವುದು ಕಾಲೇಜಿಗೆ ಹೆಮ್ಮೆಯ ವಿಚಾರ. ಈ ಮೂಲಕ ಸಂಸ್ಥೆಗೆ ಹಾಗೂ ಆಡಳಿತ ಮಂಡಳಿಗೆ ಗೌರವ ತಂದು ಗೆಲುವಿಗೆ ಕಾರಣಕರ್ತರಾದ ವಿದ್ಯಾರ್ಥಿಗಳು ಹಾಗು ತರಬೇತುದಾರ, ದೈಹಿಕ ಉಪನ್ಯಾಸಕ ರಶೀದ್‌ಗೆ ಅಭಿನಂದನೆಗಳು’ ಎಂದು ಪ್ರಾಂಶುಪಾಲರು ಹಾಗೂ ಸಯ್ಯದ್ ಮದನಿ ಆಡಳಿತ ಮಂಡಳಿ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.