ಮಹಿಳಾ ಟಿ20 ವಿಶ್ವಕಪ್‌ ವಿಜೇತರಿಗೆ ₹19.6 ಕೋಟಿ!

| Published : Sep 18 2024, 01:45 AM IST

ಸಾರಾಂಶ

ಮಹಿಳಾ ಟಿ20 ವಿಶ್ವಕಪ್‌ ವಿಜೇತರಿಗೆ ಭರ್ಜರಿ ಪ್ರಶಸ್ತಿ ಮೊತ್ತ ಘೋಷಿಸಿದ ಐಸಿಸಿ. ಪುರುಷರಿಗೆ ಸಿಗುವಷ್ಟೇ ಬಹುಮಾನ ಮೊತ್ತ ಮಹಿಳಾ ತಂಡಕ್ಕೂ ಘೋಷಣೆ. ಈ ವರ್ಷ ಟಿ20 ವಿಶ್ವಕಪ್‌ ವಿಜೇತ ತಂಡಕ್ಕೆ ಸಿಗಲಿದೆ 19.6 ಕೋಟಿ ರು. ಬಹುಮಾನ. ಕಳೆದ ಆವೃತ್ತಿಯ ಮೊತ್ತಕ್ಕಿಂತ ಶೇ.134ರಷ್ಟು ಹೆಚ್ಚಳ. ಒಟ್ಟಾರೆ ಪ್ರಶಸ್ತಿ ಮೊತ್ತ 66.5 ಕೋಟಿ ರು. ಕಳೆದ ಆವೃತ್ತಿಗಿಂತ ಶೇ.225ರಷ್ಟು ಏರಿಕೆ.

ದುಬೈ: ವೇತನ ಬಹುಮಾನ ಮೊತ್ತ ಹಂಚಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ), ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನ ಬಹುಮಾನ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಈ ವರ್ಷ ಪುರುಷರ ಟಿ20 ವಿಶ್ವಕಪ್‌ ಗೆದ್ದ ತಂಡಕ್ಕೆ ಸಿಕ್ಕಷ್ಟೇ ಪ್ರಶಸ್ತಿ ಮೊತ್ತವನ್ನು ಮಹಿಳಾ ಟಿ20 ವಿಶ್ವಕಪ್‌ ವಿಜೇತರಿಗೂ ನೀಡುವುದಾಗಿ ಮಂಗಳವಾರ ಘೋಷಿಸಿದೆ.

ಕಳೆದ ಆವೃತ್ತಿಗೆ ಹೋಲಿಸಿದರೆ ಪ್ರಶಸ್ತಿ ಮೊತ್ತ ಒಟ್ಟಾರೆ ಶೇ.225ರಷ್ಟು ಏರಿಕೆಯಾಗಿದ್ದು, ಒಟ್ಟು 7.95 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 66.60 ಕೋಟಿ ರು.) ಇರಲಿದೆ. ವಿಶ್ವಕಪ್‌ ಗೆಲ್ಲುವ ತಂಡಕ್ಕೆ 2.34 ಮಿಲಿಯನ್‌ ಅಮೆರಿಕನ್‌ ಡಾಲರ್‌ (ಅಂದಾಜು 19.6 ಕೋಟಿ ರು.) ಪ್ರಶಸ್ತಿ ಮೊತ್ತ ಸಿಗಲಿದ್ದು, ಕಳೆದ ಆವೃತ್ತಿಗೆ ಹೋಲಿಸಿದರೆ ಇದು ಶೇ.134ರಷ್ಟು ಹೆಚ್ಚು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್‌ ಆದ ಆಸ್ಟ್ರೇಲಿಯಾ ತಂಡಕ್ಕೆ 1 ಮಿಲಿಯನ್‌ ಅಮೆರಿಕನ್ ಡಾಲರ್‌ (ಅಂದಾಜು 8.37 ಕೋಟಿ ರು.) ಬಹುಮಾನ ಮೊತ್ತ ದೊರೆತಿತ್ತು. ಈ ವರ್ಷ ಚಾಂಪಿಯನ್‌ ಆದ ಭಾರತ ಪುರುಷರ ತಂಡಕ್ಕೆ 2.45 ಮಿಲಿಯನ್‌ ಡಾಲರ್‌ (20.52 ಕೋಟಿ ರು.) ಸಿಕ್ಕಿತ್ತು.

‘2030ರ ವೇಳೆಗೆ ಸಮಾನ ಬಹುಮಾನ ಮೊತ್ತ ನೀಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದ್ದೆವು. ಆ ಗುರಿಯನ್ನು 6 ವರ್ಷ ಮೊದಲೇ ತಲುಪಿದ್ದೇವೆ’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ.ರನ್ನರ್‌-ಅಪ್‌ಗೆ ₹9.80 ಕೋಟಿ

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆಯಲಿರುವ ತಂಡಕ್ಕೆ 1.17 ಮಿಲಿಯನ್‌ ಡಾಲರ್‌ (ಅಂದಾಜು 9.80 ಕೋಟಿ ರು.) ಸಿಗಲಿದೆ. ಕಳೆದ ಆವೃತ್ತಿಯಲ್ಲಿ ರನ್ನರ್‌-ಅಪ್‌ ಆಗಿದ್ದ ದ.ಆಫ್ರಿಕಾಕ್ಕೆ 5 ಲಕ್ಷ ಅಮೆರಿಕನ್‌ ಡಾಲರ್‌ (4.18 ಕೋಟಿ ರು.) ಸಿಕ್ಕಿತ್ತು.

ಇನ್ನು ಸೆಮಿಫೈನಲ್‌ಗಳಲ್ಲಿ ಸೋಲುವ 2 ತಂಡಗಳಿಗೆ ತಲಾ 6.75 ಲಕ್ಷ ಅಮೆರಿಕನ್‌ ಡಾಲರ್‌ (5.65 ಕೋಟಿ ರು.) ಸಿಗಲಿದೆ. ಇದೇ ವೇಳೆ ಗುಂಪು ಹಂತದಲ್ಲಿ ದಾಖಲಿಸುವ ಪ್ರತಿ ಗೆಲುವಿಗೆ ತಂಡಗಳಿಗೆ 26.10 ಲಕ್ಷ ರು. ಬೋನಸ್‌ ದೊರೆಯಲಿದೆ ಎಂದು ಐಸಿಸಿ ತಿಳಿಸಿದೆ.