ಬೆನ್ನು ನೋವಿನ ಕಾರಣ ನೀಡಿ ಸ್ವೀಡನ್‌ ವಿರುದ್ಧದ ಡೇವಿಸ್‌ ಕಪ್‌ ಪಂದ್ಯಕ್ಕೆ ಗೈರಾಗಿದ್ದ ಭಾರತದ ನಂ.1 ಸಿಂಗಲ್ಸ್‌ ಆಟಗಾರ. ಕೇವಲ ಒಬ್ಬ ತಜ್ಞ ಸಿಂಗಲ್ಸ್‌ ಆಟಗಾರನೊಂದಿಗೆ ಆಡಿ 0-4ರಲ್ಲಿ ಸೋತಿದ್ದ ಭಾರತ.

ನವದೆಹಲಿ: ಕಳೆದ ವಾರ ಸ್ವೀಡನ್‌ ವಿರುದ್ಧ ನಡೆದ ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪಂದ್ಯದಲ್ಲಿ ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಉದ್ದೇಶಪೂರ್ವಕವಾಗಿ ಆಡಲಿಲ್ಲ ಎನಿಸುತ್ತದೆ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ) ಅಚ್ಚರಿಯ ಹೇಳಿಕೆಯನ್ನು ನೀಡಿದೆ. ಸ್ವೀಡನ್‌ ವಿರುದ್ಧ 0-4ರ ಹೀನಾಯ ಸೋಲು ಅನುಭವಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿರುವ ಎಐಟಿಎ ಪ್ರಧಾನ ಕಾರ್ಯದರ್ಶಿ ಅನಿಲ್‌ ಧೂಪರ್‌, ‘ನಗಾಲ್‌ ಹಾಗೂ ಯೂಕಿ ಭಾಂಬ್ರಿ ಆಡಿದ್ದರೆ ಸುಧಾರಿತ ಫಲಿತಾಂಶ ನಿರೀಕ್ಷೆ ಮಾಡಬಹುದಿತ್ತು. ತಂಡದಲ್ಲಿ ಇದ್ದಿದ್ದು ಕೇವಲ ಒಬ್ಬ ತಜ್ಞ ಸಿಂಗಲ್ಸ್‌ ಆಟಗಾರ. ನಗಾಲ್‌ ಬೆನ್ನು ನೋವಿನ ಕಾರಣ ನೀಡಿ ಡೇವಿಸ್‌ ಕಪ್‌ನಿಂದ ಹಿಂದೆ ಸರಿದರು. ಆದರೆ ಈಗ ಚೀನಾದಲ್ಲಿ ಎಟಿಪಿ ಟೂರ್ನಿ ಆಡುತ್ತಿದ್ದಾರೆ. ಯೂಕಿ ತಾವು ಆಡದೆ ಇರುವುದಕ್ಕೆ ಸೂಕ್ತ ಕಾರಣ ನೀಡಿಲ್ಲ’ ಎಂದಿದ್ದಾರೆ.

ಸ್ವೀಡನ್‌ ವಿರುದ್ಧ ಭಾರತ ಸೋತ ಬಳಿಕ, ನಗಾಲ್‌ ಸೇರಿದಂತೆ ಕೆಲ ಹಾಲಿ ಹಾಗೂ ಮಾಜಿ ಆಟಗಾರರು ಎಐಟಿಎ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದರು. ಈ ಕುರಿತೂ ಪ್ರತಿಕ್ರಿಯಿಸಿರುವ ಧೂಪರ್‌, ‘ಡೇವಿಸ್‌ ಕಪ್‌ನಲ್ಲಿ ಆಡುವಂತೆ ಎಲ್ಲ ಅಗ್ರ ಆಟಗಾರರಿಗೂ ನಾಯಕ ಹಾಗೂ ಆಡಳಿತ ಮಂಡಳಿ ಪ್ರತ್ಯೇಕವಾಗಿ ಕರೆ ಮಾಡಿ ಕೇಳಲಾಗಿತ್ತು. ಆದರೆ ಎಲ್ಲರೂ ನಿರಾಕರಿಸಿದರು’ ಎಂದು ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ.

ಇದೇ ವೇಳೆ ಎಐಟಿಎ ಈ ವಿಚಾರವಾಗಿ ಟ್ವೀಟ್‌ ಸಹ ಮಾಡಿದ್ದು, ‘ಡೇವಿಸ್‌ ಕಪ್‌ ಕೇವಲ ಒಂದು ಟೆನಿಸ್‌ ಟೂರ್ನಿಯಲ್ಲ. ಜಾಗತಿಕ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಲು ಸಿಗುವ ಅವಕಾಶವದು. ಆಟಗಾರರು ಆ ಅವಕಾಶವನ್ನು ಗೌರವಿಸಬೇಕು’ ಎಂದಿದೆ.