ಅಶುತೋಶ್‌ ಶಾಕ್‌ನಿಂದ ಪಾರಾದ ಮುಂಬೈ ಇಂಡಿಯನ್ಸ್!

| Published : Apr 19 2024, 01:12 AM IST / Updated: Apr 19 2024, 04:27 AM IST

ಸಾರಾಂಶ

ಅಶುತೋಶ್‌ ಸಾಹಸಿಕ ಆಟಕ್ಕೂ ಜಗ್ಗದೆ ಗೆದ್ದ ಮುಂಬೈ. ಸೂರ್ಯ 78, ಮುಂಬೈ 7 ವಿಕೆಟಿಗೆ 192 ರನ್‌. 77ಕ್ಕೆ 6 ಬಳಿಕ ಅಶುತೋಶ್‌ 28 ಬಾಲ್‌ನಲ್ಲಿ 61 ರನ್. ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್‌

ಚಂಡೀಗಢ: ಹೀನಾಯ ಸೋಲಿನ ಭೀತಿಯಲ್ಲಿದ್ದಾಗಲೂ ಸೋಲೊಪ್ಪಲು ತಯಾರಿಲ್ಲ ಎಂಬಂತೆ ಆರ್ಭಟಿಸಿದ ಅಶುತೋಶ್‌ ಶರ್ಮಾ, ಪಂಜಾಬ್‌ಗೆ ಪಂದ್ಯವನ್ನು ಗೆಲ್ಲಿಸಿ ಕೊಡದಿದ್ದರೂ ಅಪಾರ ಪ್ರಮಾಣದ ಅಭಿಮಾನಿಗಳ ಹೃದಯ ಗೆದ್ದಿದ್ದಂತೂ ನಿಜ. 

ಈ ಬಾರಿ ಐಪಿಎಲ್‌ನಲ್ಲಿ ಪಂಜಾಬ್‌ ತಂಡ ಕ್ರಿಕೆಟ್‌ ಜಗತ್ತಿಗೆ ಪರಿಚಯಿಸಿದ ಹೊಸ ಸ್ಟಾರ್‌ ಅಶುತೋಶ್‌, ಗುರುವಾರವೂ ಮೋಡಿ ಮಾಡಿದರು. ಆದರೆ ತಮ್ಮ ಸ್ಫೋಟಕ ಆಟ ವ್ಯರ್ಥವಾಯಿತು. ಪಂದ್ಯದಲ್ಲಿ ಮುಂಬೈ 9 ರನ್‌ ಗೆಲುವು ದಾಖಲಿಸಿತು. ಪಂಜಾಬ್‌ 5ನೇ ಸೋಲುಂಡಿತು.ಮೊದಲು ಬ್ಯಾಟ್ ಮಾಡಿದ ಮುಂಬೈ, ಸೂರ್ಯಕುಮಾರ್‌ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 192 ರನ್‌ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಪಂಜಾಬ್‌ 10ನೇ ಓವರ್‌ಗಾಗಲೇ ಸೋಲನ್ನು ಬಹುತೇಕ ಖಚಿತಪಡಿಸಿಕೊಂಡಿತ್ತು. 

ಆದರೆ ಶಶಾಂಕ್‌ ಸಿಂಗ್‌ ಹಾಗೂ ಅಶುತೋಶ್‌ ಶರ್ಮಾ ಅಷ್ಟು ಸುಲಭದಲ್ಲಿ ಸೋಲೊಪ್ಪಲು ತಯಾರಿರಲಿಲ್ಲ. 10ನೇ ಓವರ್‌ ವೇಳೆಗೆ 77 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದಾಗ ಶಶಾಂಕ್ ಸಿಂಗ್‌ 25 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ನೊಂದಿಗೆ 41 ರನ್‌ ಚಚ್ಚಿದರು. ಅವರು ಔಟಾದ ಬಳಿಕ ಮುಂಬೈ ಬೌಲರ್‌ಗಳನ್ನು ಚೆಂಡಾಡಿದ ಅಶುತೋಶ್‌, 28 ಎಸೆತಗಳಲ್ಲಿ 2 ಬೌಂಡರಿ, 7 ಸಿಕ್ಸರ್‌ನೊಂದಿಗೆ 61 ರನ್ ಚಚ್ಚಿದರು. ಆದರೆ 18ನೇ ಓವರಲ್ಲಿ ಅಶುತೋಶ್‌ ಔಟಾಗುವುದರೊಂದಿಗೆ ಪಂಜಾಬ್‌ ಗೆಲುವಿನ ಆಸೆ ಕೈಬಿಟ್ಟಿತು. ಬೂಮ್ರಾ ಹಾಗೂ ಕೋಟ್ಜೀ ತಲಾ 3 ವಿಕೆಟ್‌ ಕಿತ್ತರು. 

ಸೂರ್ಯ ಶೋ: ಇದಕ್ಕೂ ಮುನ್ನ ಮುಂಬೈಗೆ ಸೂರ್ಯಕುಮಾರ್‌ರ ಶೋ ನೆರವಾಯಿತು. ಇಶಾನ್‌(08) ಬೇಗನೇ ಔಟಾದರೂ, ರೋಹಿತ್‌ 36, ತಿಲಕ್‌ ವರ್ಮಾ 34 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಸೂರ್ಯಕುಮಾರ್‌ 53 ಎಸೆತಗಳಲ್ಲಿ 78 ರನ್‌ ಸಿಡಿಸಿದರು. ಹರ್ಷಲ್‌ ಪಟೇಲ್‌ 3 ವಿಕೆಟ್‌ ಕಿತ್ತರು.ಸ್ಕೋರ್‌: ಮುಂಬೈ 20 ಓವರಲ್ಲಿ 192/7 (ಸೂರ್ಯಕುಮಾರ್‌ 78, ರೋಹಿತ್‌ 36, ಹರ್ಷಲ್‌ 3-31), ಪಂಜಾಬ್‌ 19.1 ಓವರಲ್ಲಿ 183/10 (ಅಶುತೋಶ್‌ 61, ಶಶಾಂಕ್‌ 41, ಬೂಮ್ರಾ 3-21, ಕೋಟ್ಜೀ 3-32)