ಸಾರಾಂಶ
ಮುಂಬೈ: 2025ರ ಐಪಿಎಲ್ ಹತ್ತಿರವಾಗುತ್ತಿದ್ದಂತೆ ತಂಡಗಳು ಸಿದ್ಧತೆ ಆರಂಭಿಸಿವೆ. ಕಳೆದ ಆವೃತ್ತಿಯಲ್ಲಿ ಹೊಸ ನಾಯಕನನ್ನು ನೇಮಿಸಿ ಇಕ್ಕಟ್ಟಿಗೆ ಸಿಲುಕಿದ್ದ ಮುಂಬೈ ಇಂಡಿಯನ್ಸ್, ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ನಾಯಕ ಹಾರ್ದಿಕ್ ಪಾಂಡ್ಯ ಅವರ ಬಗ್ಗೆ ಅಸಡ್ಡೆ ತೋರದಂತೆ, ಅವರನ್ನು ಗೌರವಿಸಿ ಸಂಪೂರ್ಣ ಸಹಕಾರ ನೀಡುವಂತೆ ಕೆಲ ಪ್ರಮುಖ ಆಟಗಾರರಿಗೆ ಸೂಚನೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಕೆಲ ದಿನಗಳ ಹಿಂದೆ ಪ್ರಮುಖ ಆಟಗಾರರ ಜೊತೆ ಸಭೆ ನಡೆಸಿರುವ ಮುಂಬೈ ತಂಡದ ಮಾಲಿಕರು, ಹಾರ್ದಿಕ್‌ರನ್ನು ಬೆಂಬಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕಳೆದ ಆವೃತ್ತಿಗೂ ಮುನ್ನ ಗುಜರಾತ್ ತಂಡದಿಂದ ಹಾರ್ದಿಕ್‌ರನ್ನು ಕರೆತಂದು ರೋಹಿತ್ ಶರ್ಮಾ ಬದಲು ತಂಡದ ನಾಯಕನನ್ನಾಗಿ ನೇಮಿಸಲಾಗಿತ್ತು. ಮಾಲಿಕರ ಈ ನಿರ್ಧಾರ ತಂಡದೊಳಗೆ ಮನಸ್ತಾಪ ಶುರುವಾಗಲು ಕಾರಣವಾಗಿತ್ತು. ಜಸ್‌ಪ್ರೀತ್ ಬೂಮ್ರಾ, ಸೂರ್ಯಕುಮಾರ್ ಯಾದವ್ ಸಾಮಾಜಿಕ ತಾಣಗಳಲ್ಲಿ ಮಾರ್ಮಿಕ ಸಂದೇಶಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ತಂಡದೊಳಗೆ ರೋಹಿತ್ ಬಣ ಹಾಗೂ ಹಾರ್ದಿಕ್ ಬಣ ಎಂದು ಎರಡು ಗುಂಪುಗಳು ಹುಟ್ಟಿಕೊಂಡಿವೆ ಎನ್ನುವ ಸುದ್ದಿಯೂ ಹರಿದಾಡಿತ್ತು. ಇದಕ್ಕೆ ಪೂರಕವಾಗಿ ಮುಂಬೈ ತಂಡ 14 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ ನಿರಾಸೆ ಮೂಡಿಸಿತ್ತು.
ಕಳೆದ ವರ್ಷದ ಬೆಳವಣಿಗೆಗಳನ್ನು ಗಮನಿಸಿದ್ದ ತಂಡದ ಮಾಲಿಕರು ಈ ಬಾರಿ ಟೂರ್ನಿ ಆರಂಭಕ್ಕೂ ಮೊದಲೇ ಎಚ್ಚೆತ್ತುಕೊಂಡಿದ್ದು, ಪ್ರಮುಖ ಆಟಗಾರರೊಂದಿಗೆ ಮಾತುಕತೆ ನಡೆಸಿ ಸೂಚನೆ ನೀಡಿದ್ದಾರೆ.
2025ರ ಐಪಿಎಲ್ ಟೂರ್ನಿಯು ಮಾ.14ರಿಂದ ಆರಂಭಗೊಳ್ಳಲಿದ್ದು, ಮೇ 25ರ ವರೆಗೂ ನಡೆಯಲಿದೆ.