ಮಹಿಳಾ ಐಪಿಎಲ್‌ಗೆ ಫೆ.23ರಂದು ಬೆಂಗಳೂರಿನಲ್ಲಿ ಚಾಲನೆ

| Published : Jan 24 2024, 02:03 AM IST / Updated: Jan 24 2024, 08:13 AM IST

ಮಹಿಳಾ ಐಪಿಎಲ್‌ಗೆ ಫೆ.23ರಂದು ಬೆಂಗಳೂರಿನಲ್ಲಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಹುನಿರೀಕ್ಷಿತ 2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌ (ಮಹಿಳಾ ಐಪಿಎಲ್‌)ನ ವೇಳಾಪಟ್ಟಿ ಪ್ರಕಟಗೊಂಡಿದೆ. ಕಳೆದ ಬಾರಿ ಮುಂಬೈ ಮಾತ್ರ ಟೂರ್ನಿಗೆ ಆತಿಥ್ಯ ವಹಿಸಿದ್ದರೆ ಈ ಬಾರಿ ಪಂದ್ಯಗಳು ಬೆಂಗಳೂರು ಹಾಗೂ ದೆಹಲಿಯಲ್ಲಿ ಆಯೋಜನೆಗೊಳ್ಳಲಿವೆ. ಬೆಂಗಳೂರಲ್ಲಿ ಮೊದಲ 11 ಪಂದ್ಯಗಳು ನಡೆಯಲಿವೆ.

ನವದೆಹಲಿ: ‘ಮಹಿಳಾ ಐಪಿಎಲ್‌’ ಖ್ಯಾತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನ ಬಹುನಿರೀಕ್ಷಿತ 2ನೇ ಆವೃತ್ತಿಗೆ ಫೆ.23ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ.

ಮಂಗಳವಾರ ಬಿಸಿಸಿಐ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿತು. ಬೆಂಗಳೂರು ಹಾಗೂ ಡೆಲ್ಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. 

ಫೆ.23ರಂದು ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಹಾಗೂ ರನ್ನರ್‌-ಅಪ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಸೆಣಸಾಡಲಿವೆ. ಮಾ.15ಕ್ಕೆ ಎಲಿಮಿನೇಟರ್‌, ಮಾ.17ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ. ಟೂರ್ನಿಯಲ್ಲಿ ಒಟ್ಟು 22 ಪಂದ್ಯಗಳು ನಡೆಯಲಿವೆ.

ಟೂರ್ನಿ ಮಾದರಿ: ಟೂರ್ನಿಯಲ್ಲಿ 5 ತಂಡಗಳು ಪಾಲ್ಗೊಳ್ಳಲಿದ್ದು, ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪ್ರತಿ ತಂಡಗಳು 2 ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. 

ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ ಸ್ಥಾನ ಪಡೆದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಲಿದ್ದು, 2 ಮತ್ತು 3ನೇ ಸ್ಥಾನಿಯಾದ ತಂಡಗಳು ಎಲಿಮಿನೇಟರ್‌ನಲ್ಲಿ ಸೆಣಸಾಡಲಿವೆ. ಗೆದ್ದ ತಂಡ ಫೈನಲ್‌ ತಲುಪಲಿದೆ.

ಬೆಂಗ್ಳೂರಲ್ಲಿ 11 ಪಂದ್ಯ

ಕಳೆದ ವರ್ಷ ನಡೆದಿದ್ದ ಚೊಚ್ಚಲ ಆವೃತ್ತಿಯ ಟೂರ್ನಿಯ ಎಲ್ಲಾ ಪಂದ್ಯಗಳಿಗೂ ಮುಂಬೈ ಆತಿಥ್ಯ ವಹಿಸಿತ್ತು. ಬ್ರೆಬೋರ್ನ್‌ ಹಾಗೂ ಡಿವೈ ಪಾಟೀಲ್‌ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದಿದ್ದವು. 

ಟೂರ್ನಿಯನ್ನು ಮತ್ತಷ್ಟು ನಗರಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಬಿಸಿಸಿಐ ಈ ಬಾರಿ ಬೆಂಗಳೂರು, ಡೆಲ್ಲಿಯಲ್ಲಿ ಪಂದ್ಯಗಳನ್ನು ಆಯೋಜಿಸಲಿದೆ. 

ಫೆ.23ರಿಂದ ಮಾ.4ರ ವರೆಗೆ 11 ಪಂದ್ಯಗಳು ಬೆಂಗಳೂರಿನಲ್ಲಿ, ಮಾ.5ರಿಂದ 17ರ ವರೆಗೆ ಫೈನಲ್‌ ಸೇರಿ ಇನ್ನುಳಿದ 11 ಪಂದ್ಯಗಳು ಡೆಲ್ಲಿಯಲ್ಲಿ ನಡೆಯಲಿವೆ.

05 ತಂಡ: ಟೂರ್ನಿಯಲ್ಲಿ ಆರ್‌ಸಿಬಿ ಸೇರಿ ಒಟ್ಟು 5 ತಂಡಗಳು ಭಾಗಿಯಾಗಲಿವೆ.

24 ದಿನ: ಒಟ್ಟು 24 ದಿನಗಳ ಕಾಲ 2ನೇ ಆವೃತ್ತಿ ಟೂರ್ನಿ ನಡೆಯಲಿದೆ.

22 ಪಂದ್ಯ: ಎಲಿಮಿನೇಟರ್‌, ಫೈನಲ್‌ ಸೇರಿ ಟೂರ್ನಿಯಲ್ಲಿ 22 ಪಂದ್ಯಗಳಿವೆ. 

ಎಲ್ಲಾ ಪಂದ್ಯಗಳು ರಾತ್ರಿ 7.30ಕ್ಕೆ ಆರಂಭ, ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18 ಚಾನೆಲ್‌ನಲ್ಲಿ ನೇರಪ್ರಸಾರ.