ಸಾರಾಂಶ
ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ತಮಗೆ ಅವಕಾಶ ಸಿಗುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಆಟ ಹಾಗೂ ಮಾತಿನ ಮೂಲಕ ಪರೋಕ್ಷ ಸಂದೇಶ ರವಾನಿಸಿದ್ದಾರೆ.
ಸೋಮವಾರ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಕೊಹ್ಲಿ, ಪಂದ್ಯದ ಬಳಿಕ ಮಾತನಾಡಿ ತಮ್ಮ ಟಿ20 ಆಟ ಇನ್ನೂ ಮುಗಿದಿಲ್ಲ ಎಂದರು.
‘ಜಾಗತಿಕ ಮಟ್ಟದಲ್ಲಿ ಟಿ20 ಕ್ರಿಕೆಟ್‌ನ ಪ್ರಚಾರಕ್ಕೆ ಮಾತ್ರ ನನ್ನ ಹೆಸರನ್ನು ಬಳಸಲಾಗುತ್ತಿದೆ. ಆದರೆ ಈ ಮಾದರಿಯಲ್ಲಿ ಆಡುವ ಸಾಮರ್ಥ್ಯ ಇನ್ನೂ ಇದೆ’ ಎಂದರು.
ಇದೇ ವೇಳೆ ಇಂಗ್ಲೆಂಡ್ ವಿರುದ್ಧ ಸರಣಿ ವೇಳೆ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆದಿದ್ದ ಬಗ್ಗೆ ಮಾತನಾಡಿದ ಅವರು, ‘2 ತಿಂಗಳ ದೇಶದಲ್ಲಿರಲಿಲ್ಲ. ಯಾರೂ ಕೂಡಾ ಗುರುತಿಸಲಾಗದ ಜಾಗದಲ್ಲಿದ್ದೆವು.
ಕುಟುಂಬದೊಂದಿಗೆ ಕಳೆದ ಕ್ಷಣಗಳು ಅತ್ಯಮೂಲ್ಯ. ಇಬ್ಬರು ಮಕ್ಕಳ ತಂದೆಯಾಗಿ, ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವುದು ವಿಭಿನ್ನ ಅನುಭವ’ ಎಂದು ಕೊಹ್ಲಿ ತಿಳಿಸಿದ್ದಾರೆ.
ಸೋಮವಾರ ಪಂಜಾಬ್ ವಿರುದ್ಧ ಪಂದ್ಯದಲ್ಲಿ ವಿರಾಟ್ 49 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸೇರಿದಂತೆ 77 ರನ್ ಸಿಡಿಸಿದರು.
ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ಬಾರಿ 50+ ಸ್ಕೋರ್ ದಾಖಲಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿರಾಟ್ ಕೊಹ್ಲಿ ಅವರ ಅಮೋಘ ಪ್ರದರ್ಶನಕ್ಕೆ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.