ಟಿ20 ವಿಶ್ವಕಪ್‌ ತಂಡಗಳಿಗೆ ಕರ್ನಾಟಕದ ಕೆಎಂಎಫ್‌ ಪ್ರಾಯೋಜಕತ್ವ?

| Published : Mar 21 2024, 01:03 AM IST

ಸಾರಾಂಶ

ಕ್ರಿಕೆಟ್‌ ತಂಡದ ಪ್ರಾಯೋಜಕತ್ವ ಪಡೆಯಲು ಕೆಎಂಎಫ್‌ ನಿರ್ಧಾರ. ಐಸಿಸಿ ಟಿ20 ವಿಶ್ವಕಪ್‌ ಮೂಲಕ ಬ್ರ್ಯಾಂಡ್‌ ಪ್ರಚಾರದ ಗುರಿ. ಈ ಮೂಲಕ ಅಮುಲ್‌ಗೆ ಪೈಪೋಟಿ ನೀಡಲಿರುವ ಕೆಎಂಎಫ್‌.

ಬೆಂಗಳೂರು: ಡೈರಿ ಉತ್ಪನ್ನಗಳ ಪ್ರಮುಖ ಮಾರಾಟ ಸಂಸ್ಥೆಯಾಗಿರುವ ಅಮುಲ್‌ ಜೊತೆಗಿನ ಪೈಪೋಟಿಯನ್ನು ಕ್ರಿಕೆಟ್‌ ಅಂಗಳಕ್ಕೂ ವಿಸ್ತರಿಸಲು ನಿರ್ಧರಿಸಿರುವ ಕರ್ನಾಟಕ ಹಾಲು ಮಹಾ ಮಂಡಳಿ(ಕೆಎಂಎಫ್‌) ಮುಂಬರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ ತಂಡದ ಪ್ರಾಯೋಜಕತ್ವ ಪಡೆಯುವ ಗುರಿ ಇಟ್ಟುಕೊಂಡಿದೆ.ನಂದಿನಿ ಹೆಸರಿನಲ್ಲಿ ಡೈರಿ ಉತ್ಪನ್ನ ಮಾರಾಟ ಮಾಡುತ್ತಿರುವ ಕೆಎಂಎಫ್‌ ಈಗಾಗಲೇ ಟೆಂಡರ್‌ ಪ್ರಕಟಿಸಿದ್ದು, ಶೀಘ್ರದಲ್ಲೇ ಟಿ20 ವಿಶ್ವಕಪ್‌ನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಂಡಗಳ ಪ್ರಾಯೋಜಕತ್ವ ಪಡೆಯುವ ನಿರೀಕ್ಷೆಯಲ್ಲಿದೆ. ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈ ಮತ್ತು ಬಲಗೈ ಬ್ಯಾಟ್ಸ್‌ಮನ್‌ಗಳ ಎಡಗೈ ಮೇಲೆ ನಂದಿನಿ ಲೋಗೋ ಹಾಕಲು ಕೆಎಂಎಫ್ ಮುಂದಾಗಿದೆ. ಏಪ್ರಿಲ್‌ನಲ್ಲಿ ಟೆಂಡರ್‌ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ನೀತಿ ಸಂಹಿತೆ ಜಾರಿಗೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ಟೆಂಡರ್‌ ಅಂತಿಮಗೊಳಿಸಲಿದ್ದೇವೆ ಎಂದು ಕೆಎಂಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಗುಜರಾತ್‌ನ ಅಮುಲ್‌ ಸಂಸ್ಥೆಯು 2011ರಿಂದಲೂ ಅಫ್ಘಾನಿಸ್ತಾನ, ನ್ಯೂಜಿಲೆಂಡ್‌, ದ.ಆಫ್ರಿಕಾ, ಶ್ರೀಲಂಕಾ ಸೇರಿದಂತೆ ಕೆಲ ತಂಡಗಳ ಪ್ರಾಯೋಜತ್ವಗಳನ್ನು ಪಡೆದಿದೆ. ಸದ್ಯ ಕೆಎಂಎಫ್‌ ಕೂಡಾ ಕ್ರಿಕೆಟ್‌ ಮೂಲಕ ನಂದಿನಿ ಲೋಗೋವನ್ನು ಪ್ರಚಾರ ಮಾಡಲು ಮುಂದಾಗಿದೆ.