ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳಿಗೆ ಪೈಪೋಟಿಯೇ ಇಲ್ಲದಂತಾಗಿದೆ. ಬಹುತೇಕ ಸ್ಪರ್ಧೆಗಳಲ್ಲಿ ರಾಜ್ಯದ ಈಜುಗಾರರೇ ಪದಕ ಕೊಳ್ಳೆ ಹೊಡೆಯುತ್ತಿದ್ದು, ಪದಕ ಪಟ್ಟಿಯಲ್ಲಿ ಕರ್ನಾಟಕವನ್ನು ನಂ.1 ಸ್ಥಾನಕ್ಕೇರಿಸಿದ್ದಾರೆ.
ಕರ್ನಾಟಕ 22 ಚಿನ್ನ, ತಲಾ 10 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 42 ಪದಕ ಜಯಿಸಿದೆ. 19 ಚಿನ್ನ, 10 ಬೆಳ್ಳಿ, 9 ಕಂಚು ಸೇರಿ ಒಟ್ಟು 38 ಪದಕ ಗೆದ್ದಿರುವ ಸರ್ವಿಸಸ್, 15 ಚಿನ್ನ, 26 ಬೆಳ್ಳಿ, 20 ಕಂಚಿನೊಂದಿಗೆ ಒಟ್ಟು 61 ಪದಕ ಗೆದ್ದಿರುವ ಮಹಾರಾಷ್ಟ್ರ ಕ್ರಮವಾಗಿ 2 ಹಾಗೂ 3ನೇ ಸ್ಥಾನಗಳಲ್ಲಿವೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್ ಹಾಗೂ ಧಿನಿಧಿ ದೇಸಿಂಘು ನಡುವೆ ಯಾವು ಹೆಚ್ಚು ಪದಕ ಗೆಲ್ಲುತ್ತಾರೆ? ಎನ್ನುವ ಸ್ಪರ್ಧೆ ಏರ್ಪಟ್ಟಿದ್ದು, ಇಬ್ಬರೂ ತಲಾ 7 ಚಿನ್ನ ಜಯಿಸಿ ಮುನ್ನುಗ್ಗುತ್ತಿದ್ದಾರೆ. ಈ ಕೂಟದಲ್ಲಿ ಧಿನಿಧಿ ಒಟ್ಟು 9 ಪದಕ ಜಯಿಸಿದರೆ, ಶ್ರೀಹರಿ ಕೊರಳಿಗೆ 8 ಪದಕಗಳು ಸೇರಿವೆ.
ಸೋಮವಾರ 14 ವರ್ಷದ ಧಿನಿಧಿ, 400 ಮೀ. ಫ್ರೀ ಸ್ಟೈಲ್‌ನಲ್ಲಿ 4 ನಿಮಿಷ 24.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದರು. ಬಳಿಕ ಶ್ರೀಹರಿ, ಆಕಾಶ್ ಮಣಿ, ನೀನಾ ವೆಂಕಟೇಶ್ ಜೊತೆ ಸೇರಿ 4X100 ಮೀ. ಫ್ರೀ ಸ್ಟೈಲ್ ಮಿಶ್ರ ತಂಡ ವಿಭಾಗದಲ್ಲೂ ಸ್ವರ್ಣ ಹೆಕ್ಕಿದರು.
24 ವರ್ಷದ ಶ್ರೀಹರಿ, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 26.09 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಇದಲ್ಲದೇ, ರಾಜ್ಯಕ್ಕೆ ಈಜಿನಲ್ಲಿ ಮತ್ತೆರಡು ಚಿನ್ನ ದೊರೆಯಿತು. ಪುರುಷರ 200 ಮೀ. ಮೆಡ್ಲೆಯಲ್ಲಿ ಶೋನ್ ಗಂಗೂಲಿ, ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಹಿತಾ ನಯಾನ ಚಿನ್ನ ಗೆದ್ದರು.
ಇನ್ನು, ಪುರುಷರ 800 ಮೀ. ಸ್ಟೈಲ್‌ನಲ್ಲಿ ಅನೀಶ್ ಗೌಡ ಕಂಚು ಪಡೆದರೆ, ಪುರುಷರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಆಕಾಶ್ ಮಣಿ ಬೆಳ್ಳಿ ಗೆದ್ದರು. ಈಜು ಕ್ರೀಡೆಯ 42 ಸ್ಪರ್ಧೆಗಳ ಪೈಕಿ 37 ಸ್ಪರ್ಧೆಗಳು ಮುಗಿದಿದ್ದು, ಇನ್ನು 5 ಸ್ಪರ್ಧೆಗಳು ಬಾಕಿ ಇವೆ. ಈಜಿನಲ್ಲೇ ಕರ್ನಾಟಕ 18 ಚಿನ್ನ ಸೇರಿ ಒಟ್ಟು 33 ಪದಕ ಜಯಿಸಿದೆ.15ರ ಆ್ಯಂಥೋನಿಗೆ ಚಿನ್ನ!
ಪುರುಷರ ಶೂಟಿಂಗ್ 10 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕರ್ನಾಟಕದ ಜೊನಾಥನ್ ಆ್ಯಂಥೋನಿ ಚಿನ್ನ ಜಯಿಸಿದರು. ಬೆಂಗಳೂರಿನ ಲಕ್ಷ್ಯನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ 15 ವರ್ಷದ ಆ್ಯಂಥೋನಿ, ಫೈನಲ್‌ನಲ್ಲಿ 240.7 ಅಂಕ ಪಡೆದು ತಮಗಿಂತ ಹೆಚ್ಚು ಅನುಭವ ಇರುವ ಶೂಟರ್‌ಗಳನ್ನು ಹಿಂದಿಕ್ಕಿ ಚಿನ್ನ ವಶಪಡಿಸಿಕೊಂಡರು.
ಇನ್ನು, ಸೈಕ್ಲಿಂಗ್‌ನ ಮಹಿಳೆಯರ ಸ್ಕ್ರ್ಯಾಚ್ ರೇಸ್‌ನಲ್ಲಿ ರಾಜ್ಯದ ಕೀರ್ತಿ ರಾಮಸ್ವಾಮಿ ಚಿನ್ನದ ಪದಕ ಗೆದ್ದರು.