ಸಾರಾಂಶ
ಡೆಹ್ರಾಡೂನ್: 38ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ಸೋಮವಾರ ಕರ್ನಾಟಕ ಟೆನಿಸ್‌ನಲ್ಲಿ 3 ಸೇರಿದಂತೆ ಒಟ್ಟು 6 ಪದಕ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಪದಕ ಗಳಿಕೆಯನ್ನು 68ಕ್ಕೆ ಹೆಚ್ಚಿಸಿದೆ. ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ನಿಕಿ ಪೂನಚ್ಚ ಹಾಗೂ ಪ್ರಜ್ವಲ್ ದೇವ್ ಚಿನ್ನಕ್ಕೆ ಕೊರಳೊಡ್ಡಿದರು.
ಈ ಜೋಡಿ ಫೈನಲ್‌ನಲ್ಲಿ ಸರ್ವಿಸಸ್‌ನ ಇಸಾಖ್ ಇಕ್ಬಾಲ್-ಫೈಸಲ್ ಕಮರ್ ವಿರುದ್ಧ 6-3, 6-1 ಜಯಗಳಿಸಿತು. ಇತ್ತೀಚೆಗಷ್ಟೇ ನಿಕಿ, ಪ್ರಜ್ವಲ್ ಪುರುಷರ ತಂಡ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. ನಿಕಿಗೆ ಮತ್ತೊಂದು ಪದಕ ಖಚಿತವಾಗಿದ್ದು, ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಮಂಗಳವಾರ ಸೋಹಾ ಸಾದಿಕ್ ಜೊತೆಗೂಡಿ ಆಡಲಿದ್ದಾರೆ.2 ಕಂಚು: ಟೆನಿಸ್‌ನ ಸಿಂಗಲ್ಸ್‌ನಲ್ಲಿ ರಾಜ್ಯ 2 ಕಂಚು ಜಯಿಸಿತು. ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸರ್ವಿಸಸ್‌ನ ಇಕ್ಬಾಲ್ ವಿರುದ್ಧ ಸೋಲನುಭವಿಸಿದರು. ಮಹಾರಾಷ್ಟ್ರದ ವೈಷ್ಣವಿ ವಿರುದ್ಧದ ಮಹಿಳಾ ಸಿಂಗಲ್ಸ್ ಸೆಮೀಸ್ ವೇಳೆ ಅಮೋಧಿನಿ ನಾಯ್ಕ್ ಗಾಯಗೊಂಡ ಹೊರಬಿದ್ದರು. ಹೀಗಾಗಿ ಕಂಚಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಅಥ್ಲೆಟಿಕ್ಸ್‌ನಲ್ಲಿ 5ನೇ ಪದಕ
ಕರ್ನಾಟಕ ಮಹಿಳಾ ತಂಡ 4*400 ಮೀ. ರಿಲೇ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಜಯಿಸಿತು. ಪ್ರಜ್ಞಾ, ಜ್ಯೋತಿಕಾ, ಅರ್ಪಿತಾ, ದೀಕ್ಷಿತಾ ಅವರನ್ನೊಳಗೊಂಡ ತಂಡ 3 ನಿಮಿಷ 43.89 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾಯಿತು. ಕೂಟದ ಅಥ್ಲೆಟಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ, 2 ಕಂಚು ಗೆದ್ದಿದ್ದು, ಮತ್ತಷ್ಟು ಪದಕ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಿದೆ.
ಸೈಕ್ಲಿಂಗ್‌ನಲ್ಲಿ ಬೆಳ್ಳಿ, ಜುಡೋದಲ್ಲಿ ಕಂಚು
ಸೈಕ್ಲಿಂಗ್ ಸ್ಪರ್ಧೆಯ ಮಹಿಳೆಯರ ಎಂಟಿಬಿ ಟೈಮ್ ಟ್ರಯಲ್‌ನಲ್ಲಿ ಸ್ಟಾರ್ ನರ್ಜಾರಿ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮಹಿಳೆಯರ ಜುಡೊ 57 ಕೆ.ಜಿ. ಕೆಳಗಿನ ವಿಭಾಗದಲ್ಲಿ ಸಮತಾ ರಾಣೆ ಕಂಚು ಜಯಿಸಿದರು.
ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಕರ್ನಾಟಕ
ಕೆಲ ದಿನಗಳ ಹಿಂದೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕರ್ನಾಟಕ ಸೋಮವಾರ 3ನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯ 32 ಚಿನ್ನ, 15 ಬೆಳ್ಳಿ, 19 ಕಂಚು ಸೇರಿ 66 ಪದಕ ಗೆದ್ದಿದೆ. ಸರ್ವಿಸಸ್ 45 ಚಿನ್ನ ಸೇರಿ 80 ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ 33 ಚಿನ್ನ ಸೇರಿ 129 ಪದಕಗಳೊಂದಿಗೆ 2ನೇ ಸ್ಥಾನದಲ್ಲಿದೆ.