ಡಿ.6ರಿಂದ ಬೆಂಗ್ಳೂರಲ್ಲಿ ರಾಷ್ಟ್ರೀಯ ಕುಸ್ತಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕೂಟ

| Published : Nov 09 2024, 07:22 AM IST

National sports day 2024 wishes

ಸಾರಾಂಶ

ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಆಯೋಜನೆಗೆ ಕರ್ನಾಟಕ ಸಜ್ಜಾಗಿದೆ. ಡಿ.6ರಿಂದ 8ರ ವರೆಗೂ ಬೆಂಗಳೂರಿನಲ್ಲಿ ಹಿರಿಯರ ಕುಸ್ತಿ ಕೂಟ ನಡೆಯಲಿದೆ ಎಂದು ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಹಾಗೂ ಕರ್ನಾಟಕ ಕುಸ್ತಿ ಸಂಸ್ಥೆ ಶುಕ್ರವಾರ ಮಾಹಿತಿ ಪ್ರಕಟಿಸಿದೆ.

ಬೆಂಗಳೂರು : ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಆಯೋಜನೆಗೆ ಕರ್ನಾಟಕ ಸಜ್ಜಾಗಿದೆ. ಡಿ.6ರಿಂದ 8ರ ವರೆಗೂ ಬೆಂಗಳೂರಿನಲ್ಲಿ ಹಿರಿಯರ ಕುಸ್ತಿ ಕೂಟ ನಡೆಯಲಿದೆ ಎಂದು ಭಾರತೀಯ ಕುಸ್ತಿ ಫೆಡರೇಶನ್‌(ಡಬ್ಲ್ಯುಎಫ್‌ಐ) ಹಾಗೂ ಕರ್ನಾಟಕ ಕುಸ್ತಿ ಸಂಸ್ಥೆ ಶುಕ್ರವಾರ ಮಾಹಿತಿ ಪ್ರಕಟಿಸಿದೆ.

ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. 3 ದಿನಗಳ ಚಾಂಪಿಯನ್‌ಶಿಪ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಅಮನ್‌ ಶೆರಾವತ್‌, ಮಾಜಿ ಅಂಡರ್‌-20 ವಿಶ್ವ ಚಾಂಪಿಯನ್‌ ಅಂತಿಮ್‌ ಪಂಘಲ್‌, ದೀಪಕ್‌ ಪೂನಿಯಾ ಸೇರಿದಂತೆ ವಿವಿಧ ರಾಜ್ಯಗಳ 1000ಕ್ಕೂ ಹೆಚ್ಚು ಕುಸ್ತಿಪಟುಗಳು ಕಣಕ್ಕಿಳಿಯಲಿದ್ದಾರೆ. ರೈಲ್ವೇಸ್‌, ಸರ್ವಿಸಸ್‌ ಸೇರಿದಂತೆ 25 ರಾಜ್ಯ ಸಂಸ್ಥೆಗಳ ಸ್ಪರ್ಧಿಗಳು ಕೂಟದಲ್ಲಿ ಭಾಗಿಯಾಗಲಿದ್ದಾರೆ.

ರಾಷ್ಟ್ರೀಯ ಕುಸ್ತಿ ಕೂಟ ಆಯೋಜನೆ ಕರ್ನಾಟಕ ಪಾಲಿಗೆ ಗೌರವ ಮತ್ತು ಹೆಮ್ಮೆಯ ಸಂಗತಿ. ಈ ಕೂಟದ ಮೂಲಕ ದೇಶದಲ್ಲೆಡೆಯ ಕುಸ್ತಿಪಟುಗಳು ಅಸಾಧಾರಣ ಕೌಶಲ್ಯ ಪ್ರದರ್ಶಿಸುವುದರ ಜೊತೆಗೆ ಕರ್ನಾಟಕದಲ್ಲಿನ ಕುಸ್ತಿ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಲಿದೆ. ಭವಿಷ್ಯದ ಒಲಿಂಪಿಯನ್‌ಗಳನ್ನು ಪೋಷಿಸುವ ವಿಶ್ವ ದರ್ಜೆಯ ವೇದಿಕೆ ಒದಗಿಸಲು ನಾವು ಬದ್ಧರಾಗಿದ್ದೇವೆ. ರಾಜ್ಯದ ಯುವ ಪೀಳಿಗೆಗೂ ಈ ಕುಸ್ತಿ ಚಾಂಪಿಯನ್‌ಶಿಪ್‌ ಸ್ಫೂರ್ತಿ ಒದಗಿಸಲಿದೆ. ಯಶಸ್ವಿಯಾಗಿ ಚಾಂಪಿಯನ್‌ಶಿಪ್‌ ಆಯೋಜಿಸಲು ಕರ್ನಾಟಕ ಸಜ್ಜಾಗಿದೆ.

ಗುಣರಂಜನ್‌ ಶೆಟ್ಟಿ, ರಾಜ್ಯ ಕುಸ್ತಿ ಸಂಸ್ಥೆ ಅಧ್ಯಕ್ಷ