ಸಾರಾಂಶ
40 ಎಕರೆ ಜಾಗವನ್ನು ಖರೀದಿಸಿ ಅಲ್ಲಿ ನಿರ್ಮಾಣಗೊಂಡಿರುವ ಎಕ್ಸಲೆನ್ಸ್ ಸೆಂಟರನ್ನು ಶನಿವಾರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಉದ್ಘಾಟಿಸಿದ್ದರು.
ಬೆಂಗಳೂರು : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತನ್ನದೇ ಸ್ವಂತ ಜಾಗವನ್ನು ಮಾಡಿಕೊಳ್ಳಲು 24 ವರ್ಷಗಳು ಬೇಕಾಯಿತು. ಆದರೆ ಇಷ್ಟು ವರ್ಷ ಕಾಲ ಕಾಯ್ದಿದ್ದಕ್ಕೂ ಸಾರ್ಥಕ ಎನ್ನುವ ರೀತಿಯಲ್ಲಿ ಬಿಸಿಸಿಐ, ಬೆಂಗಳೂರು ಸಮೀಪ ದೇವನಹಳ್ಳಿಯಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಎಕ್ಸಲೆನ್ಸ್ ಸೆಂಟರ್ ಅನ್ನು ನಿರ್ಮಿಸಿದೆ.
40 ಎಕರೆ ಜಾಗವನ್ನು ಖರೀದಿಸಿ ಅಲ್ಲಿ ನಿರ್ಮಾಣಗೊಂಡಿರುವ ಎಕ್ಸಲೆನ್ಸ್ ಸೆಂಟರನ್ನು ಶನಿವಾರ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ ಉದ್ಘಾಟಿಸಿದ್ದರು.
ಭಾನುವಾರ ಆಯ್ದ ಕೆಲ ಮಾಧ್ಯಮ ಸಂಸ್ಥೆಗಳನ್ನು ಬಿಸಿಸಿಐ, ತನ್ನ ಹೊಸ ಕೇಂದ್ರವನ್ನು ವೀಕ್ಷಿಸಲು ಆಹ್ವಾನಿಸಿತ್ತು. ‘ಕನ್ನಡಪ್ರಭ’ ಸಹ ಬಿಸಿಸಿಐ ಎಕ್ಸಲೆನ್ಸ್ ಸೆಂಟರ್‌ಗೆ ಭೇಟಿ ನೀಡಿ, ಅತ್ಯುತ್ತಮ ವ್ಯವಸ್ಥೆಗಳ ‘ಮೊದಲ ವ್ಯಕ್ತಿ ಅನುಭವ’ ಪಡೆಯಿತು. 3 ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನಗಳು ಒಂದೇ ಕಾಪೌಂಡ್‌ನೊಳಗೆ ಇದ್ದು, ನೆಟ್ಸ್‌ನಲ್ಲಿ 45 ಸೇರಿ ಒಟ್ಟು 80ಕ್ಕೂ ಹೆಚ್ಚು ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ.
ಯಾವುದೇ ದೇಶಕ್ಕೆ ಪ್ರವಾಸ ಕೈಗೊಳ್ಳುವ ಮುನ್ನ ಭಾರತ ತಂಡ ಆ ದೇಶದ ಪಿಚ್‌ಗಳಿಗೆ ತಮ್ಮ ಆಟ ಸರಿಹೊಂದಿಕೊಳ್ಳುವಂತೆ ಸಿದ್ಧತೆ ನಡೆಸಬಹುದಾಗಿದೆ. 3 ಗ್ರೌಂಡ್‌ಗಳ ಪೈಕಿ ಮೊದಲನೆಯದ್ದು ಗ್ರೌಂಡ್ ‘ಎ’, ಇದರ ಬೌಂಡರಿ ಅಳತೆ 85 ಮೀ. ಇದ್ದು, ಮುಂಬೈನಿಂದ ತರಿಸಿದ ಕೆಂಪು ಮಣ್ಣಿನಿಂದ 13 ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಪಿಚ್‌ಗಳು ಉತ್ತಮ ಬೌನ್ಸ್ ಹೊಂದಿರಲಿವೆ. ಇತ್ತೀಚೆಗೆ ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಟೆಸ್ಟ್‌ನಲ್ಲಿ ಇಂಥದ್ದೇ ಪಿಚ್ ಬಳಕೆ ಮಾಡಲಾಗಿತ್ತು. ಈ ವರ್ಷಾಂತ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿನ ಬೌನ್ಸಿ ಪಿಚ್‌ಗಳಿಗೆ ಅಗತ್ಯವಿರುವ ಸಿದ್ಧತೆ ನಡೆಸಲು ಅನುಕೂಲವಾಗಲಿದೆ.
ಈ ಮೈದಾನಕ್ಕೆ ಹೆರಿಂಗ್‌ಬೋನ್ ಒಳಚರಂಡಿ ವ್ಯವಸ್ಥೆ (ಸಬ್-ಏರ್ ಮಾದರಿ ರೀತಿ) ಇದ್ದು, ಫ್ಲಡ್‌ಲೈಟ್ಸ್ ಸಹ ಅಳವಡಿಕೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲಿ ಬೇಕಿದ್ದರೂ ತುರ್ತಾಗಿ ಈ ಮೈದಾನದಲ್ಲಿ ಪಂದ್ಯವನ್ನು ಆಯೋಜಿಸಬಹುದಾಗಿದೆ. ಪಿಚ್‌ಗೆ ಮಂಡ್ಯ ಮಣ್ಣು ಬಳಕೆ!
ಇನ್ನು ‘ಬಿ’ ಹಾಗೂ ‘ಸಿ’ ಗ್ರೌಂಡ್‌ಗಳನ್ನು ಪ್ರಧಾನವಾಗಿ ಅಭ್ಯಾಸ ಪಂದ್ಯಗಳಿಗೆ ಬಳಕೆ ಮಾಡಲು ಬಿಸಿಸಿಐ ನಿರ್ಧರಿಸಿದೆ. ದೇಸಿ ಪಂದ್ಯಗಳಿಗೆ ಈ ಮೈದಾನಗಳನ್ನು ಬಳಕೆ ಮಾಡಬಹುದಾಗಿದೆ. ಈ ಮೈದಾನಗಳ ಬೌಂಡರಿ ಅಳತೆ 75 ಮೀ. ಇದೆ. ಇನ್ನು ಮಂಡ್ಯದ ಸ್ಥಳೀಯ ಮಣ್ಣು ಹಾಗೂ ಒಡಿಶಾದ ಕಲಹಂಡಿಯಲ್ಲಿ ಹತ್ತಿ ಬೆಳೆಯಲು ಬಳಸುವ ಕಪ್ಪು ಮಣ್ಣನ್ನು ತರಿಸಿ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ನೆಟ್ಸ್‌ನಲ್ಲಿವೆ 45 ಪಿಚ್‌ಗಳು
ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸ ನಡೆಸಲೆಂದೇ 45 ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು 9 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದೊಂದು ವಿಭಾಗದಲ್ಲೂ ಪಿಚ್‌ಗಳ ವರ್ತನೆ ಬೇರೆ ಬೇರೆ ರೀತಿ ಇರಲಿದೆ. ಇನ್ನು ಇಂಗ್ಲೆಂಡ್‌ನಿಂದ ಸೇಫ್ಟಿ ನೆಟ್‌ಗಳನ್ನು ತರಿಸಿ ಹಾಕಲಾಗಿದೆ.
ಇನ್ನು ಹೊರಾಂಗಣದಲ್ಲಿ ಫೀಲ್ಡಿಂಗ್ ಅಭ್ಯಾಸಕ್ಕೆಂದೇ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಲಾಗಿದೆ. 6 ರನ್ನಿಂಗ್ ಟ್ರ್ಯಾಕ್‌ಗಳಿದ್ದು, ನೈಜ ಹುಲ್ಲು ಹಾಗೂ ಇಟಲಿಯಿಂದ ತರಿಸಿದ ಮೊಂಡೊ ಕಂಪನಿಯ ಸಿಂಥಟಿಕ್ ಪದಾರ್ಥದಿಂದ ಕೂಡಿವೆ. ಒಳಾಂಗಣ ಅಭ್ಯಾಸಕ್ಕೆ 8 ಪಿಚ್!
ಹೊರಾಂಗಣದಂತೆಯೇ ಒಳಾಂಗಣ ಅಭ್ಯಾಸಕ್ಕೆ ಸಿದ್ಧಗೊಂಡಿರುವ ವ್ಯವಸ್ಥೆಯೂ ವಿಶ್ವ ದರ್ಜೆಯದ್ದಾಗಿದ್ದು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಿಂದ ತರಿಸಿದ 8 ಟರ್ಫ್ ಪಿಚ್‌ಗಳನ್ನು ಅಳವಡಿಸಲಾಗಿದೆ.
ಆಟಗಾರರ ಫಿಟ್ನೆಸ್‌ಗೆ ಸರ್ವ ರೀತಿಯ ವ್ಯವಸ್ಥೆ
ಎಕ್ಸಲೆನ್ಸ್ ಸೆಂಟರ್‌ನಲ್ಲೇ ಅತ್ಯಾಧುನಿಕ ಕ್ರೀಡಾ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಫಿಟ್ನೆಸ್ ಪರೀಕ್ಷೆಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಆಟಗಾರ ಗಾಯಗೊಂಡರೂ ಈ ಕೇಂದ್ರಕ್ಕೇ ಬರಬೇಕಿದ್ದು, ಇಲ್ಲಿಯೇ ಎಲ್ಲಾ ರೀತಿಯ ಚಿಕಿತ್ಸೆ ದೊರೆಯಲಿದೆ. ಫಿಸಿಯೋಥೆರಪಿ ಕೇಂದ್ರ, ಜಿಮ್, ಮೆಡಿಸಿನ್ ಲ್ಯಾಬ್, ಸ್ಲೀಪಿಂಗ್ ಪಾಡ್ಸ್‌ಗಳು ಇವೆ. ಮುಂಬರುವ ದಿನಗಳಲ್ಲಿ ಭಾರತೀಯ ಒಲಿಂಪಿಕ್ ಅಥ್ಲೀಟ್‌ಗಳಿಗೂ ಈ ಕೇಂದ್ರದಲ್ಲಿ ಅಭ್ಯಾಸ ನಡೆಸಲು ಅವಕಾಶ ಮಾಡಿಕೊಡುವುದಾಗಿ ಜಯ್ ಶಾ ತಿಳಿಸಿದ್ದಾರೆ.