ಸಾರಾಂಶ
ಬೆಂಗಳೂರು: ನೆಟ್ಟಕಲ್ಲಪ್ಪ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನ 2ನೇ ಹಾಗೂ ಕೊನೆ ದಿನವೂ ಕರ್ನಾಟಕದ ಸ್ಪರ್ಧಿಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ರಾಜ್ಯದ ವಿವಿಧ ಈಜು ಕೇಂದ್ರಗಳ ಸ್ಪರ್ಧಿಗಳು ಬಹುಪಾಲು ಪದಕಗಳನ್ನು ತಮ್ಮದಾಗಿಸಿಕೊಂಡರು.ಮೊದಲ ದಿನ 2 ಚಿನ್ನ ಗೆದ್ದಿದ್ದ ಬಸವನಗುಡಿ ಈಜು ಕೇಂದ್ರದ ಆಕಾಶ್ ಮಣಿ ಮತ್ತೆರಡು ಬಂಗಾರ ಜಯಿಸಿದರು. ಸ್ಕಿನ್ಸ್ 50 ಮೀ. ಫ್ರೀಸ್ಟೈಲ್, 100 ಮೀ ಫ್ರೀಸ್ಟೈಲ್‌ನಲ್ಲಿ ಆಕಾಶ್ ಚಾಂಪಿಯನ್ ಆದರು. ಶನಿವಾರ 2 ಚಿನ್ನ ಗೆದ್ದಿದ್ದ ಬಸವನಗುಡಿ ಕೇಂದ್ರದ ಅನೀಶ್ ಗೌಡ ಭಾನುವಾರ 400 ಮೀ ಫ್ರೀಸ್ಟೈಲ್‌ನಲ್ಲಿ ಬಂಗಾರ ತಮ್ಮದಾಗಿಸಿಕೊಂಡರು. ವಿದಿತ್ ಶಂಕರ್ ಸ್ಕಿನ್ಸ್ 50 ಮೀ ಬ್ರೆಸ್ಟ್‌ಸ್ಟ್ರೋಕ್, 100 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಾಂಪಿಯನ್ ಆದರು.
ಡಾಲ್ಫಿನ್ ಈಜು ಕೇಂದ್ರದ ಅಕ್ಷಜ್ ಠಾಕೂರಿಯಾ 200 ಮೀ ಮೆಡ್ಲೆ, 200 ಮೀ ಫ್ರೀಸ್ಟೈಲ್, 100 ಮೀ ಫ್ರೀಸ್ಟೈಲ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು.ಮಹಿಳಾ ವಿಭಾಗದಲ್ಲಿ ಡಾಲ್ಫಿನ್ ಈಜು ಕೇಂದ್ರದ ಸ್ಪರ್ಧಿ, ಒಲಿಂಪಿಯನ್ ಧಿನಿಧಿ ದೇಸಿಂಘು 100 ಮೀ ಫ್ರೀಸ್ಟೈಲ್ ಹಾಗೂ 200 ಮೀ. ಮೆಡ್ಲೆ ಚಿನ್ನ ಗೆದ್ದರು. ಮಹಿಳೆಯರ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಹಾಗೂ 100 ಮೀ ಬ್ರೆಸ್ಟ್‌ಸ್ಟ್ರೋಕ್ ಹರ್ಷಿತಾ ಜಯರಾಮ್ ಚಿನ್ನ ಸಂಪಾದಿಸಿದರು.