ಕೋಚ್‌ ಗಂಭೀರ್‌ ತಂಡಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ: ರೋಹಿತ್

| Published : Sep 18 2024, 01:46 AM IST

ಸಾರಾಂಶ

ಹೊಸ ಕೋಚಿಂಗ್‌ ಸಿಬ್ಬಂದಿಯ ದೃಷ್ಟಿಕೋನ ಬೇರೆ ರೀತಿ ಇದೆ. ಕೋಚ್‌ ಗೌತಮ್‌ ಗಂಭೀರ್‌, ಮಾರ್ನೆ ಮಾರ್ಕೆಲ್‌, ಅಭಿಷೇಕ್‌ ನಾಯರ್‌ ಜೊತೆ ಸೇರಿ ಭಾರತ ತಂಡಕ್ಕೆ ಉತ್ತಮ ಫಲಿತಾಂಶ ದೊರಕಿಸಿಕೊಡುವುದೊಂದೇ ನಮ್ಮ ಗುರಿ ಎಂದ ನಾಯಕ ರೋಹಿತ್‌ ಶರ್ಮಾ.

- ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗಂಭೀರ್‌ರ ಶೈಲಿಗೂ ವ್ಯತ್ಯಾಸವಿದೆಚೆನ್ನೈ: ಹೊಸ ಕೋಚಿಂಗ್‌ ಸಿಬ್ಬಂದಿಯ ದೃಷ್ಟಿಕೋನ ಬೇರೆ ರೀತಿ ಇದೆ. ಆದರೆ ತಂಡಕ್ಕೆ ಅದರಿಂದ ಯಾವುದೇ ತೊಂದರೆಯಿಲ್ಲ ಎಂದು ಭಾರತದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಸೆ.19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ಗೆ ಭಾರತ ಕಠಿಣ ಅಭ್ಯಾಸ ನಡೆಸುತ್ತಿದ್ದು, ಪ್ರಧಾನ ಕೋಚ್‌ ಗೌತಮ್‌ ಗಂಭೀರ್ ಸೇರಿದಂತೆ ಹೊಸದಾಗಿ ನೇಮಕಗೊಂಡಿರುವ ಕೋಚಿಂಗ್‌ ಸಿಬ್ಬಂದಿಗೆ ಇದು ಮೊದಲ ಸವಾಲು ಎನಿಸಿದೆ.

ಈ ಸಂಬಂಧ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ‘ರಾಹುಲ್‌ ದ್ರಾವಿಡ್‌ರ ಕೋಚಿಂಗ್‌ ಶೈಲಿಗೂ ಗೌತಮ್‌ ಗಂಭೀರ್‌ರ ಕೋಚಿಂಗ್‌ ಶೈಲಿಗೂ ವ್ಯತ್ಯಾಸವಿದೆ. ಆದರೆ ಗಂಭೀರ್‌ ಸೇರಿದಂತೆ ಎಲ್ಲಾ ಹೊಸ ಕೋಚ್‌ಗಳು ತಂಡಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಅವರೆಲ್ಲರೂ ತಂಡದ ಅಗತ್ಯತೆಯನ್ನು ಅರಿತಿದ್ದಾರೆ’ ಎಂದರು. ‘ಗಂಭೀರ್‌, ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌ ಜೊತೆ ನಾನು ಬಹಳ ವರ್ಷ ಆಡಿದ್ದೇನೆ. ಮಾರ್ಕೆಲ್‌ರನ್ನು ಹಲವು ಸಲ ಎದುರಿಸಿದ್ದೇನೆ. ಎಲ್ಲರೂ ತಾಂತ್ರಿಕವಾಗಿ ಬಹಳ ಅನುಭವ ಇರುವವರು. ಇನ್ನು ರ್‍ಯಾನ್‌ ಟೆನ್‌ ಡೊಶ್ಕಾಟೆ ಸಹ ತಂಡಕ್ಕೆ ಸೂಕ್ತ ನೆರವು ಒದಗಿಸಬಲ್ಲರು ಎನ್ನುವ ವಿಶ್ವಾಸವಿದೆ. ಭಾರತ ತಂಡಕ್ಕೆ ಉತ್ತಮ ಫಲಿತಾಂಶ ದೊರಕಿಸಿಕೊಡಬೇಕು ಎನ್ನುವುದೊಂದೇ ನಮ್ಮೆಲ್ಲರ ಗುರಿ’ ಎಂದು ರೋಹಿತ್‌ ಹೇಳಿದರು. ರಾಹುಲ್‌ ಬೆಂಬಲಕ್ಕೆ

ನಾಯಕ ರೋಹಿತ್‌ಕಳೆದ ಕೆಲ ವರ್ಷಗಳಿಂದ ಅಸ್ಥಿರ ಪ್ರದರ್ಶನ ತೋರುತ್ತಿರುವ ಕರ್ನಾಟಕದ ಕೆ.ಎಲ್‌.ರಾಹುಲ್‌ರನ್ನು ನಾಯಕ ರೋಹಿತ್‌ ಬೆಂಬಲಿಸಿದ್ದು, ಅವರ ಸಾಮರ್ಥ್ಯವನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ. ‘ರಾಹುಲ್‌ ಎಂಥ ಅದ್ಭುತ ಆಟಗಾರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರನ್ನು ತಂಡದ ಆಡಳಿತ ಬೆಂಬಲಿಸಲಿದೆ. ರಾಹುಲ್‌ ಎಲ್ಲ ಪಂದ್ಯಗಳಲ್ಲೂ ಆಡಬೇಕು ಎನ್ನುವುದು ನಮ್ಮ ಇಚ್ಛೆ. ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ’ ಎಂದ ರೋಹಿತ್‌, ಬಾಂಗ್ಲಾ ವಿರುದ್ಧ 2 ಟೆಸ್ಟ್‌ಗಳಲ್ಲೂ ರಾಹುಲ್‌ ಆಡುವುದು ಖಚಿತ ಎನ್ನುವ ಸುಳಿವು ನೀಡಿದ್ದಾರೆ.