ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌: ಜೋಕೋವಿಚ್‌ ಶುಭಾರಂಭ

| Published : May 30 2024, 12:46 AM IST / Updated: May 30 2024, 04:48 AM IST

ಸಾರಾಂಶ

ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದ ಗ್ರೀಸ್‌ನ ಸಿಟ್ಸಿಪಾಸ್‌. ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಸ್ಪೇನ್‌ ಕಾರ್ಲೊಸ್‌ ಆಲ್ಕರಜ್‌ ಕೂಡಾ 3ನೇ ಸುತ್ತಿಗೆ ಲಗ್ಗೆ ಇಟ್ಟರು.

ಪ್ಯಾರಿಸ್‌: 25ನೇ ಗ್ರ್ಯಾನ್‌ ಸ್ಲಾಂ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. 

ಮಂಗಳವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜೋಕೋವಿಚ್‌, ಫ್ರಾನ್ಸ್‌ನ ಪಿಯರ್‌ ಹ್ಯೂಸ್‌ ಹರ್ಬರ್ಟ್‌ ವಿರುದ್ಧ 6-4, 7-6 (3), 6-4 ಸೆಟ್‌ಗಳಲ್ಲಿ ಸುಲಭ ಗೆಲುವು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ 3 ಬಾರಿ ಚಾಂಪಿಯನ್‌ ಆಗಿರುವ ಸರ್ಬಿಯಾದ ಜೋಕೋ 2ನೇ ಸುತ್ತಿನಲ್ಲಿ ವಿಶ್ವ ನಂ.3, ಸ್ಪೇನ್‌ ರಾಬರ್ಟೊ ಕ್ಯಾರ್‌ಬೆಲ್ಲಾಸ್‌ ಬೀನಾ ವಿರುದ್ಧ ಸೆಣಸಾಡಲಿದ್ದಾರೆ.ಇದೇ ವೇಳೆ 9ನೇ ಶ್ರೇಯಾಂಕಿತ ಗ್ರೀಸ್‌ನ ಸ್ಟೆಫಾನೋಸ್‌ ಸಿಟ್ಸಿಪಾಸ್‌ 3ನೇ ಸುತ್ತಿಗೆ ಪ್ರವೇಶಿಸಿದರು. ಅವರು 2ನೇ ಸುತ್ತಿನಲ್ಲಿ ಜರ್ಮನಿಯ ಡೇನಿಯಲ್ ಆಲ್ಟ್ಮೇಯರ್ ವಿರುದ್ಧ 6-3, 6-2, 6-7(2/7), 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಜಬುರ್‌ಗೆ ಜಯ: 3 ಬಾರಿ ಗ್ರ್ಯಾನ್‌ಸ್ಲಾಂ ರನ್ನರ್‌-ಅಪ್‌, ಟ್ಯುನೀಶಿಯಾದ ಒನ್ಸ್‌ ಜಬುರ್‌ ಮಹಿಳಾ ಸಿಂಗಲ್ಸ್‌ನಲ್ಲಿ 3ನೇ ಸುತ್ತಿಗೇರಿದರು. ಅವರು ಕೊಲಂಬಿಯಾದ ಕ್ಯಾಮಿಲಾ ಒಸೊರಿಯೊ ವಿರುದ್ಧ 2ನೇ ಸುತ್ತಿನಲ್ಲಿ 6-3, 1-6, 6-3ರಲ್ಲಿ ಜಯಗಳಿಸಿದರು.

3ನೇ ಸುತ್ತಿಗೆ ಆಲ್ಕರಜ್‌

ಹಾಲಿ ವಿಂಬಲ್ಡನ್‌ ಚಾಂಪಿಯನ್‌, ಸ್ಪೇನ್‌ ಕಾರ್ಲೊಸ್‌ ಆಲ್ಕರಜ್‌ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದ್ದ 21 ವರ್ಷದ ಆಲ್ಕರಜ್‌, ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನೆದರ್‌ಲೆಂಡ್ಸ್‌ನ ಜಾಸ್ಪೆರ್ ಡಿ ಜೊಂಗ್‌ ವಿರುದ್ಧ 6-3, 6-4, 2-6, 6-2 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.

ಇಂದು ಬೋಪಣ್ಣ, ಭಾಂಬ್ರಿ ಕಣಕ್ಕೆ

ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹಣ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಗುರುವಾರ ಮೊದಲ ಸುತ್ತಿನ ಪಂದ್ಯವಾಡಲಿದೆ. ಅವರಿಗೆ ಫಿನ್‌ಲೆಂಡ್‌ನ ಎಮಿಲ್‌-ಹಂಗೇರಿಯ ಮಾರ್ಟನ್‌ ಫುಕ್ಸೋವಿಕ್ಸ್‌ ಸವಾಲು ಎದುರಾಗಲಿದೆ. ಭಾರತದ ಯೂಕಿ ಭಾಂಬ್ರಿ ಅವರು ಫ್ರಾನ್ಸ್‌ನ ಅಲ್ಬಾನೊ ಒಲಿವೆಟ್ಟಿ ಜೊತೆಗೂಡಿ ಕಣಕ್ಕಿಳಿಯಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.