370 ಗ್ರ್ಯಾನ್‌ಸ್ಲಾಂ ಗೆಲುವು: ಜೋಕೋ ಹೊಸ ಇತಿಹಾಸ

| Published : Jun 05 2024, 12:32 AM IST

ಸಾರಾಂಶ

ಪಂದ್ಯದ ನಡುವೆ ಗಾಯಗೊಂಡ ಹೊರತಾಗಿಯೂ ಜೋಕೋ ಹೋರಾಟ ಬಿಡಲಿಲ್ಲ. ಸೋಲಿನ ಭೀತಿಗೆ ಒಳಗಾದರೂ ಅತ್ಯಾಕರ್ಷಕ ಕಮ್‌ಬ್ಯಾಕ್‌ ಮೂಲಕ ಪಂದ್ಯ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪ್ಯಾರಿಸ್‌: ವಿಶ್ವ ನಂ.1, ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಗಾಯದ ನಡುವೆಯೇ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೇರಿದ್ದಾರೆ. ಇದರೊಂದಿಗೆ ಗ್ರ್ಯಾನ್‌ಸ್ಲಾಂನಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸದ್ಯ ಅವರು 370 ಗೆಲುವು ದಾಖಲಿಸಿದ್ದು, ರೋಜರ್‌ ಫೆಡರರ್‌(369 ಪಂದ್ಯ)ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದರು.ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ಜೋಕೋ ವಿಶ್ವ ನಂ.23, ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೆಲೊ ವಿರುದ್ಧ 6-1, 5-7, 3-6, 7-5, 6-3 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 2 ಮತ್ತು 3ನೇ ಸೆಟ್‌ ಕಳೆದುಕೊಂಡು, 4ನೇ ಸೆಟ್‌ನಲ್ಲಿ 5-5ರ ಅಂಚಿಗೆ ತಲುಪಿ ಸೋಲುವ ಭೀತಿಯಲ್ಲಿದ್ದರೂ ಹೋರಾಟ ಬಿಡದ ಜೋಕೋ ತಾವೇಕೆ ವಿಶ್ವ ಶ್ರೇಷ್ಠ ಟೆನಿಸಿಗ ಎಂಬುದನ್ನು ತೋರಿಸಿಕೊಟ್ಟರು. ಪಂದ್ಯದ ನಡುವೆ ಮಂಡಿ ಗಾಯಕ್ಕೆ ತುತ್ತಾದ ಜೋಕೋ ಅಂಗಳದಲ್ಲೇ ಚಿಕಿತ್ಸೆ ಪಡೆದು ಆಟ ಪೂರ್ಣಗೊಳಿಸಿದರು. ಆದರೆ ಕ್ವಾರ್ಟರ್‌ನಲ್ಲಿ ಆಡುವ ಬಗ್ಗೆ ಸ್ವತಃ ಜೋಕೋ ಅನುಮಾನ ವ್ಯಕ್ತಪಡಿಸಿದ್ದಾರೆ.