ಮಂಡಿ ಗಾಯ: ಫ್ರೆಂಚ್‌ ಓಪನ್‌ನಿಂದಲೇ ನಿರ್ಗಮಿಸಿದ ಜೋಕೋವಿಚ್‌

| Published : Jun 05 2024, 12:30 AM IST

ಸಾರಾಂಶ

ಮಂಡಿ ಗಾಯದ ಕಾರಣದಿಂದ ಜೋಕೋ ಟೂರ್ನಿಯಲ್ಲಿ ಮುಂದುವರಿಯದಿರಲು ನಿರ್ಧರಿಸಿದರು. ಅವರ ವಿರುದ್ಧ ಕ್ವಾರ್ಟರ್‌ನಲ್ಲಿ ಸೆಣಸಬೇಕಿದ್ದ ನಾರ್ವೆಯ ಕ್ಯಾಸ್ಪೆರ್ ರುಡ್‌ ನೇರವಾಗಿ ಸೆಮೀಸ್‌ಗೇರಿದ್ದಾರೆ.

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವ ವಿಶ್ವ ನಂ.1 ನೋವಾಕ್‌ ಜೋಕೋವಿಚ್‌ರ ಕನಸು ಭಗ್ನಗೊಂಡಿದೆ. ಮಂಗಳವಾರ ಮಂಡಿ ಗಾಯದ ಕಾರಣದಿಂದ ಅವರು ಟೂರ್ನಿಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದು, ಇದನ್ನು ಆಯೋಜಕರು ಖಚಿತಪಡಿಸಿದ್ದಾರೆ.ಸೋಮವಾರ ರಾತ್ರಿ ಪುರುಷರ ಸಿಂಗಲ್ಸ್‌ 4ನೇ ಸುತ್ತಿನ ಪಂದ್ಯದಲ್ಲಿ ಜೋಕೋ ವಿಶ್ವ ನಂ.23, ಅರ್ಜೆಂಟೀನಾದ ಫ್ರಾನ್ಸಿಸ್ಕೊ ಸೆರುಂಡೆಲೊ ವಿರುದ್ಧ 6-1, 5-7, 3-6, 7-5, 6-3 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದ್ದರು. 2 ಮತ್ತು 3ನೇ ಸೆಟ್‌ ಕಳೆದುಕೊಂಡು, 4ನೇ ಸೆಟ್‌ನಲ್ಲಿ 5-5ರ ಅಂಚಿಗೆ ತಲುಪಿ ಸೋಲುವ ಭೀತಿಯಲ್ಲಿದ್ದರೂ ಹೋರಾಟ ಬಿಡದ ಜೋಕೋ ತಾವೇಕೆ ವಿಶ್ವ ಶ್ರೇಷ್ಠ ಟೆನಿಸಿಗ ಎಂಬುದನ್ನು ತೋರಿಸಿಕೊಟ್ಟರು. ಪಂದ್ಯದ ನಡುವೆ ಮಂಡಿ ಗಾಯಕ್ಕೆ ತುತ್ತಾದ ಜೋಕೋ ಅಂಗಳದಲ್ಲೇ ಚಿಕಿತ್ಸೆ ಪಡೆದು ಆಟ ಪೂರ್ಣಗೊಳಿಸಿದರು. ಆದರೆ ಗಾಯದ ಪ್ರಮಾಣ ಹೆಚ್ಚಿರುವ ಕಾರಣ ಟೂರ್ನಿಯಿಂದ ಹೊರನಡೆದಿದ್ದಾರೆ. ಅವರ ವಿರುದ್ಧ ಕ್ವಾರ್ಟರ್‌ನಲ್ಲಿ ಸೆಣಸಬೇಕಿದ್ದ ನಾರ್ವೆಯ ಕ್ಯಾಸ್ಪೆರ್ ರುಡ್‌ ನೇರವಾಗಿ ಸೆಮೀಸ್‌ಗೇರಿದ್ದಾರೆ. ವಿಶ್ವ ನಂ.7 ರುಡ್‌ ಅವರು ಕಳೆದೆರಡು ಆವೃತ್ತಿಗಳಲ್ಲಿ ಫ್ರೆಂಚ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಆಗಿದ್ದರು.