ಟಿ 20 ವಿಶ್ವಕಪ್‌: ನ್ಯೂಯಾರ್ಕ್‌ ಸ್ಟೇಡಿಯಂ ಪಿಚ್‌ ಬಗ್ಗೆ ಭಾರತ ಅಸಮಾಧಾನ?

| Published : Jun 07 2024, 12:33 AM IST / Updated: Jun 07 2024, 04:21 AM IST

ಟಿ 20 ವಿಶ್ವಕಪ್‌: ನ್ಯೂಯಾರ್ಕ್‌ ಸ್ಟೇಡಿಯಂ ಪಿಚ್‌ ಬಗ್ಗೆ ಭಾರತ ಅಸಮಾಧಾನ?
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂಯಾರ್ಕ್‌ ಕ್ರಿಕೆಟ್‌ ಸ್ಟೇಡಿಯಂನ ಪಿಚ್‌ ಅಪಾಯಕಾರಿನಾ? ಪಿಚ್‌ ಸರಿಯಿಲ್ಲ ಎಂದು ದೂರು ನೀಡಿದ್ಯಾ ಟೀಂ ಇಂಡಿಯಾ? ಪಿಚ್‌ ಸರಿಯಿಲ್ಲ ಎಂದು ಐಸಿಸಿ ಒಪ್ಪಿಕೊಂಡಿದ್ದೇಕೆ?

ನ್ಯೂಯಾರ್ಕ್‌: ಅಮೆರಿಕದಲ್ಲಿ ಕ್ರಿಕೆಟ್‌ ಜನಪ್ರಿಯಗೊಳಿಸಬೇಕು ಎನ್ನುವ ಉದ್ದೇಶದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ), ಈ ಬಾರಿ ಆ ದೇಶದಲ್ಲಿ ಟಿ20 ವಿಶ್ವಕಪ್‌ ಆಯೋಜಿಸಿದೆ. 

ಆದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳದ ಐಸಿಸಿ ಬಗ್ಗೆ ಟೂರ್ನಿಯ ಆರಂಭದಲ್ಲೇ ಆಕ್ಷೇಪ ಕೇಳಿಬರುತ್ತಿದ್ದು, ಐಸಿಸಿಯ ಉದ್ದೇಶಕ್ಕೆ ಹಿನ್ನಡೆ ಉಂಟಾದಂತೆ ಕಂಡು ಬರುತ್ತಿದೆ.ಬುಧವಾರ ಐರ್ಲೆಂಡ್‌ ವಿರುದ್ಧ ಪಂದ್ಯವಾಡಿದ ಬಳಿಕ ಭಾರತ ಇಲ್ಲಿನ ನಾಸೌ ಕ್ರೀಡಾಂಗಣದ ಡ್ರಾಪ್‌ ಇನ್‌ ಪಿಚ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಲ್ಲಿನ ಪಿಚ್‌ನಲ್ಲಿ ಅನಿರೀಕ್ಷಿತ ಬೌನ್ಸ್‌ ಇದ್ದು, ಬೌನ್ಸ್‌ನಲ್ಲಿ ಏರುಪೇರು ಕಂಡುಬಂತು. ಇದರಿಂದಾಗಿ ರೋಹಿತ್‌ ಶರ್ಮಾ ಹಾಗೂ ರಿಷಭ್‌ ಪಂತ್‌ ಇಬ್ಬರ ಮೊಣಕೈಗೂ ಚೆಂಡು ಬಡಿಯಿತು. ರೋಹಿತ್‌ ನೋವಿನಿಂದ ಮೈದಾನ ತೊರೆಯಬೇಕಾಯಿತು. ಇನ್ನು ವಿಶ್ವಕಪ್‌ಗೆಂದೇ ಸಿದ್ಧಗೊಂಡಿರುವ ಈ ಕ್ರೀಡಾಂಗಣದ ಬೌಂಡರಿ ಅಳತೆಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಒಂದು ಕಡೆಯ ಬೌಂಡರಿಗೂ ಮತ್ತೊಂದು ಕಡೆಯ ಬೌಂಡರಿಗೂ 10 ಮೀ. ವ್ಯತ್ಯಾಸವಿದ್ದು, ಈ ಬಗ್ಗೆಯೂ ತಂಡಗಳು ಆಕ್ಷೇಪ ವ್ಯಕ್ತಪಡಿಸಿವೆ ಎನ್ನಲಾಗಿದೆ.ಇನ್ನು, ಇಲ್ಲಿ ನಡೆದಿರುವ ಪಂದ್ಯಗಳಲ್ಲಿ ಕಡಿಮೆ ಮೊತ್ತ ದಾಖಲಾಗಿದ್ದು, ಈ ಬಗ್ಗೆಯೂ ಅನೇಕರಿಂದ ಟೀಕೆ ವ್ಯಕ್ತವಾಗಿದೆ. ಜೂ.9ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯವೂ ಲೋ ಸ್ಕೋರಿಂಗ್‌ ಪಂದ್ಯವಾಗುವ ಆತಂಕ ಇದೆ ಎನ್ನಲಾಗಿದೆ.

ಪಿಚ್‌ ಸರಿಯಿಲ್ಲ ಎಂದು ಒಪ್ಪಿದ ಐಸಿಸಿ

ನ್ಯೂಯಾರ್ಕ್‌ನ ಪಿಚ್‌ ಅಪಾಯಕಾರಿಯಾಗಿದೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಒಪ್ಪಿಕೊಂಡಿರುವ ಐಸಿಸಿ, ಮುಂದಿನ ಪಂದ್ಯಗಳ ವೇಳೆಗೆ ಪಿಚ್‌ನ ಗುಣಮಟ್ಟ ಹೆಚ್ಚಿಸುವುದಾಗಿ ತಿಳಿಸಿದೆ.