ಸಾರಾಂಶ
ಪ್ಯಾರಿಸ್: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಶುಕ್ರವಾರ ರಾತ್ರಿ ಸ್ವರ್ಗವೇ ಧರೆಗಿಳಿದು ಬರಲಿದ್ದು, ಪ್ಯಾರಿಸ್ ನಗರ ಕಂಗೊಳಿಸಲಿದೆ. ಸ್ಥಳೀಯ ಕಾಲಮಾನ ಸಂಜೆ 7.30ಕ್ಕೆ (ಭಾರತೀಯ ಕಾಲಮಾನದಲ್ಲಿ ರಾತ್ರಿ 11 ಗಂಟೆ) ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ.
ಒಲಿಂಪಿಕ್ ಕ್ರೀಡಾಕೂಟದ ಪ್ರಮುಖಾಂಶಗಳಲ್ಲಿ ಒಂದಾದ ಉದ್ಘಾಟನಾ ಸಮಾರಂಭವನ್ನು ಈ ಬಾರಿ ವಿಭಿನ್ನವಾಗಿ ನಡೆಸಲು ಆಯೋಜಕರು ನಿರ್ಧರಿಸಿದ್ದು, ಒಲಿಂಪಿಕ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಟೇಡಿಯಂನ ಹೊರಗೆ ಕಾರ್ಯಕ್ರಮ ನಡೆಯಲಿದೆ. ಪ್ಯಾರಿಸ್ ನಗರದಲ್ಲಿ ಹರಿಯುವ ಸೀನ್ ನದಿಯಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆಗೊಳ್ಳಲಿದ್ದು, ಇದಕ್ಕಾಗಿ ಉತ್ಕೃಷ್ಟ ಮಟ್ಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಿಂದೆಂದೂ ಕಂಡು ಕೇಳರಿಯದೆ ರೀತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.
100+ ಬೋಟ್, 10000+ ಅಥ್ಲೀಟ್‌ಗಳು!
ಉದ್ಘಾಟನಾ ಸಮಾರಂಭವು ಸೀನ್ ನದಿಯ ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನ ಬಳಿ ಆರಂಭಗೊಳ್ಳಲಿದ್ದು, ಐಫಿಲ್ ಟವರ್‌ನ ಬಳಿ ಇರುವ ಟ್ರೊಕಾಡೆರೊ ಬಳಿ ಮುಕ್ತಾಯಗೊಳ್ಳಲಿದೆ. ಈ ಎರಡು ಸ್ಥಳಗಳ ನಡುವೆ 6 ಕಿ.ಮೀ. ಅಂತರವಿದ್ದು, ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿರುವ 206 ರಾಷ್ಟ್ರಗಳ 10500ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು ಕರೆದೊಯ್ಯಲು 100ಕ್ಕೂ ಹೆಚ್ಚು ದೊಡ್ಡ ಹಾಗೂ ಸಣ್ಣ ಗಾತ್ರಗಳ ದೋಣಿಗಳ ವ್ಯವಸ್ಥೆ ಮಾಡಲಾಗಿದೆ. ಬೋಟ್‌ಗಳು ನೊಟ್ರೆ ಡೇಮ್, ಪಾಂಟ್ ಡೆಸ್ ಆರ್ಟ್ಸ್ ಸೇರಿ ಪ್ಯಾರಿಸ್‌ನ ಇನ್ನೂ ಕೆಲ ಐತಿಹಾಸಿಕ ತಾಣಗಳನ್ನು ಹಾದು ಹೋಗಲಿವೆ.
34 ಸೇತುವೆಗಳ ಮೇಲೂ ಪ್ರದರ್ಶನ
ಆಸ್ಟರ್‌ಲಿಟ್ಜ್ ಬ್ರಿಡ್ಜ್‌ನಿಂದ ಐಫಿಲ್ ಟವರ್ ಇರುವ ಟ್ರೊಕಾಡೆರೊ ನಡುವೆ 34 ಸೇತುವೆಗಳು ಇವೆ. ಈ ಎಲ್ಲಾ ಸೇತುವೆಗಳ ಮೇಲೂ ಕಲಾವಿದರು ಪ್ರದರ್ಶನ ನೀಡುತ್ತಿರುತ್ತಾರೆ. ಫ್ರಾನ್ಸ್ ಹಾಗೂ ಯುರೋಪಿನ ಸಾಂಸ್ಕೃತಿಕ ಸಂಗೀತ, ನೃತ್ಯಗಳ ಪ್ರದರ್ಶನದ ಜೊತೆಗೆ ಯುವ ಪೀಳಿಗೆಗೆ ಹಿಡಿಸುವ ರಾಕ್, ಪಾಪ್ ಸಂಗೀತವೂ ಇರಲಿದೆ.
3000ಕ್ಕೂ ಹೆಚ್ಚು ಕಲಾವಿದರು
ಉದ್ಘಾಟನಾ ಸಮಾರಂಭದಲ್ಲಿ 3000ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಫ್ರಾನ್ಸ್‌ನ ಪ್ರಖ್ಯಾತ ನಟ ಹಾಗೂ ನಾಟಕ ಗಳ ನಿರ್ದೇಶಕ ಥಾಮಸ್ ಜೊಲ್ಲಿ ಕಾರ್ಯಕ್ರಮಗಳ ಕಲಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಜಾಗತಿಕ ಮಟ್ಟದ ಕಲಾವಿದರೂ ತಮ್ಮ ಕಲೆ ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದ ಗುಟ್ಟನ್ನು ಆಯೋಜಕರು ಬಿಟ್ಟುಕೊಟ್ಟಿಲ್ಲ. ಕಲಾವಿದರು ತಮ್ಮ ಪ್ರದರ್ಶನಕ್ಕೆ ಸಿದ್ಧತೆಗಳನ್ನು ರಹಸ್ಯ ಸ್ಥಳಗಳಲ್ಲಿ ನಡೆಸಿರುವುದಾಗಿ ತಿಳಿದುಬಂದಿದೆ.
3 ಗಂಟೆಗಳ ಕಾರ್ಯಕ್ರಮ
ಉದ್ಘಾಟನಾ ಸಮಾರಂಭವು ಮೂರು ಗಂಟೆಗಳಿಗೆ ಹೆಚ್ಚು ಸಮಯ ನಡೆಯಲಿದ್ದು, ನದಿಯಲ್ಲಿ 6 ಕಿ.ಮೀ. ಪಥ ಸಂಚಲನ ಮುಕ್ತಾಯಗೊಂಡ ಬಳಿಕ ಐಫಿಲ್ ಟವರ್‌ನ ಮುಂಭಾಗ ಸಾಂಸ್ಕೃತಿಕ, ಒಲಿಂಪಿಕ್ಸ್ ಜ್ಯೋತಿ ಬೆಳಗುವ ಕಾರ್ಯಕ್ರಮಗಳು ನಡೆಯಲಿದೆ. ಒಲಿಂಪಿಕ್ಸ್ ಜ್ಯೋತಿ ಈಗಾಗಲೇ 10000 ಕಿ.ಮೀ.ಗೂ ಹೆಚ್ಚು ದೂರ ಪ್ರಯಾಣಿಸಿ ಪ್ಯಾರಿಸ್ ತಲುಪಿದ್ದು, ಜ್ಯೋತಿ ಬೆಳಗುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಸೇರಿ ಹಲವು ದೇಶಗಳ ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
4 ಲಕ್ಷ ಪ್ರೇಕ್ಷಕರಿಗೆ ಆಸನ ವ್ಯವಸ್ಥೆ?
ಸೀನ್ ನದಿಯ ಎರಡೂ ದಂಡೆಗಳಲ್ಲಿ ತಾತ್ಕಾಲಿಕ ಆಸನಗಳನ್ನು ಅಳವಡಿಸಲಾಗಿದ್ದು, ಅಂದಾಜು 4 ಲಕ್ಷ ಜನರು ನೇರವಾಗಿ ಉದ್ಘಾಟನಾ ಸಮಾರಂಭದ ವೀಕ್ಷಣೆ ಮಾಡಲಿದ್ದಾರೆ ಎನ್ನಲಾಗಿದೆ. 2 ಲಕ್ಷಕ್ಕೂ ಹೆಚ್ಚಿನ ಟಿಕೆಟ್‌ಗಳನ್ನು ಆಯೋಜಕರು ಉಚಿತವಾಗಿಯೇ ಹಂಚಿದ್ದಾರೆ. ಎಲ್ಲಾ 34 ಸೇತುವೆಗಳ ಬಳಿಯೂ ಸಾವಿರಾರು ಮಂದಿ ಪ್ರೇಕ್ಷಕರು ಸೇರಲಿದ್ದಾರೆ. ಇನ್ನು 6 ಕಿ.ಮೀ ಉದ್ದಕ್ಕೂ ಸೇರಿ ಪ್ಯಾರಿಸ್ ನಗರದ ಹಲವು ಕಡೆಗಳಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿದ್ದು, ಕಾರ್ಯಕ್ರಮಗಳು ನೇರ ಪ್ರಸಾರಗೊಳ್ಳಲಿವೆ.
45000 ಪೊಲೀಸರಿಂದ ಭದ್ರತೆ!
ಪ್ಯಾರಿಸ್ ನಗರದ ಹೃದಯ ಭಾಗದಲ್ಲಿ ಲಕ್ಷಾಂತರ ಮಂದಿ ಸೇರಲಿರುವ ಕಾರಣ, ಭದ್ರತೆ ಒದಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಹೀಗಾಗಿ ಫ್ರಾನ್ಸ್ ಸರ್ಕಾರ ಸುಮಾರು 45000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ನಗರ ಪೊಲೀಸರು, ಭೂಸೇನೆ, ವಾಯು, ನೌಕಾ ಪಡೆಗಳು, ಶ್ವಾನ ದಳ, ಕಮಾಂಡೋಗಳು ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸುಮಾರು 30 ದೋಣಿಗಳಲ್ಲಿ ಭದ್ರತಾ ಸಿಬ್ಬಂದಿ ಪಥ ಸಂಚಲನದ ಉದ್ದಕ್ಕೂ ತೆರಳಲಿದ್ದಾರೆ ಎನ್ನಲಾಗಿದೆ. 6 ಕಿ.ಮೀ. ವ್ಯಾಪ್ತಿಯಲ್ಲಿ ಸಾವಿರಾರು ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಯಾವುದೇ ರೀತಿಯ ಸಮಸ್ಯೆ ಆಗದಂತೆ ತಡೆಯಲು ಎಐ ಸೇರಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ.
ಸಿಂಧು, ಶರತ್ ಭಾರತದ ಧ್ವಜಧಾರಿಗಳು
ಪಥ ಸಂಚಲನದಲ್ಲಿ ಭಾರತ ತಂಡವನ್ನು 2 ಬಾರಿ ಒಲಿಂಪಿಕ್ ಪದಕ ವಿಜೇತ ಶಟ್ಲರ್ ಪಿ.ವಿ.ಸಿಂಧು, 5ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಮುನ್ನಡೆಸಲಿದ್ದಾರೆ. ಭಾರತದ ಪುರುಷ ಅಥ್ಲೀಟ್‌ಗಳು ಕುರ್ತಾ ಪೈಜಾಮ ಧರಿಸಲಿದ್ದು, ಮಹಿಳಾ ಅಥ್ಲೀಟ್‌ಗಳು ಸೀರೆಯಲ್ಲಿ ಕಂಗೊಳಿಸಲಿದ್ದಾರೆ. ಭಾರತದ 112 ಕ್ರೀಡಾಪಟುಗಳು 16 ವಿವಿಧ ಕ್ರೀಡೆಗಳ ಒಟ್ಟು 69 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಐವರು ಮೀಸಲು ಅಥ್ಲೀಟ್‌ಗಳೂ ಇದ್ದಾರೆ.ಪ್ಲ್ಯಾನ್ ‘ಬಿ’, ಪ್ಲ್ಯಾನ್ ಸಿ’ ಸಿದ್ಧ
ಸೀನ್ ನದಿ ಮೇಲೆ ನಿಗದಿಯಾಗಿರುವ ಉದ್ಘಾಟನಾ ಸಮಾರಂಭ ಸುಸೂತ್ರವಾಗಿ ನಡೆಯಲು ಫ್ರಾನ್ಸ್ ಸರ್ಕಾರ ಎಲ್ಲಾ ರೀತಿಯ ಬಿಗಿ ಭದ್ರತೆ ಕೈಗೊಂಡಿದೆ. ಆದರೆ ಭಯೋತ್ಪಾದಕರ ದಾಳಿ ಭೀತಿ ಎದುರಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಸಮಾರಂಭಕ್ಕೆ ಪ್ಲ್ಯಾನ್ ‘ಬಿ’ ಮತ್ತು ‘ಸಿ’ ಸಿದ್ಧಪಡಿಸಿದೆ. ಒಂದು ವೇಳೆ ಸೀನ್ ನದಿ ಮೇಲೆ ಸಮಾರಂಭ ಆಯೋಜಿಸುವುದು ಸೂಕ್ತವಲ್ಲ ಎಂದೆನಿಸಿದರೆ, ಸಮಾರಂಭವನ್ನು ಐಫಿಲ್ ಟವರ್‌ನ ಮುಂಭಾಗದ ಟ್ರೊಕಾಡೆರೊ ಸ್ಕ್ವೇರ್‌ನಲ್ಲಿ ಆಯೋಜಿಸಲಿದೆ. ಅಲ್ಲೂ ಸಾಧ್ಯವಾಗದಿದ್ದರೆ ಕೊನೆ ಆಯ್ಕೆ ಎಂಬಂತೆ ಸ್ಟೇಡ್ ಡೆ ಫ್ರಾನ್ಸ್ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸುವ ಯೋಜನೆ ರೂಪಿಸಲಾಗಿದೆ.
ಉದ್ಘಾಟನಾ ಸಮಾರಂಭ ಆರಂಭ: ರಾತ್ರಿ 11ಕ್ಕೆ, ನೇರ ಪ್ರಸಾರ: ಸ್ಪೋರ್ಟ್ಸ್18 1 ವಾಹಿನಿ, ಜಿಯೋ ಸಿನಿಮಾ(ಉಚಿತ).