ಸಾರಾಂಶ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಸಾಧನೆಗೈದ ಭಾರತದ ಕ್ರೀಡಾಪಟುಗಳು ಮಂಗಳವಾರ ತವರಿಗೆ ಹಿಂದಿರುಗಿದ್ದು, ಅದ್ಧೂರಿ ಸ್ವಾಗತ ಕೋರಲಾಯಿತು.
ನಗರದ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಅಧಿಕಾರಿಗಳನ್ನು ನೂರಾರು ಕ್ರೀಡಾಭಿಮಾನಿಗಳು, ಕುಟುಂಬಸ್ಥರು ಹಾಗೂ ಅಧಿಕಾರಿಗಳು ಸ್ವಾಗತಿಸಿದರು.
ಹೂಹಾರ ಹಾಕಿ, ಸಿಹಿ ತಿಂಡಿ ಹಂಚಿ, ಜೈಕಾರ ಕೂಗುತ್ತಾ ಅವರನ್ನು ಸ್ವಾಗತಿಸಲಾಯಿತು. ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಝಾರಿಯಾ ಸೇರಿದಂತೆ ಕೆಲ ಕ್ರೀಡಾಪಟುಗಳನ್ನು ಅಭಿಮಾನಿಗಳು ಹೆಗಲ ಮೇಲೆ ಕುಳ್ಳಿರಿಸಿ ಸಂಭ್ರಮಿಸಿದರು. ಭಾರತದ ತ್ರಿವರ್ಣ ಧ್ವಜ ಪ್ರದರ್ಶಿಸಿ, ಡೋಲು ಬಾರಿಸಿ ಆತ್ಮೀಯ ಸ್ವಾಗತ ಕೋರಲಾಯಿತು. ಈ ವೇಳೆ ಕೆಲ ಅಥ್ಲೀಟ್‌ಗಳು ತಮ್ಮ ಪ್ಯಾರಿಸ್ ಅನುಭವವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು.
ಅಭಿಮಾನಿಗಳೊಂದಿಗೆ ಫೋಟೋ ಕೂಡಾ ಕ್ಲಿಕ್ಕಿಸಿಕೊಂಡರು.ಪದಕ ವಿಜೇತ ಕ್ರೀಡಾಪಟುಗಳಾದ ಸುಮಿತ್ ಅಂತಿಲ್, ಶೀತಲ್ ದೇವಿ, ನಿಶಾದ್ ಕುಮಾರ್, ನವ್‌ದೀಪ್ ಸಿಂಗ್, ಯೋಗೇಶ್ ಕಥುನಿಯಾ, ಮರಿಯಪ್ಪನ್ ತಂಗವೇಲು, ಸೆಮಾ ಹೊಕಾಟೊ, ಹರ್ವಿಂದರ್ ಸಿಂಗ್, ಪ್ರೀತಿ ಪಾಲ್, ಸಿಮ್ರನ್ ಸಿಂಗ್, ಮುಖ್ಯ ಕೋಚ್ ಸತ್ಯನಾರಾಯಣ ಸೇರಿದಂತೆ ಪ್ರಮುಖರು ಭಾರತಕ್ಕೆ ಆಗಮಿಸಿದ ತಂಡದಲ್ಲಿದ್ದರು.
ಅವನಿ ಲೇಖರಾ, ಮನೀಶ್ ನರ್ವಾಲ್, ರಾಕೇಶ್ ಕುಮಾರ್, ಮೋನಾ ಅಗರ್‌ವಾಲ್, ಕರ್ನಾಟಕದ ರಕ್ಷಿತಾ ರಾಜು ಸೇರಿದಂತೆ ಬಹುತೇಕ ಕ್ರೀಡಾಪಟುಗಳು ಕೆಲ ದಿನಗಳ ಹಿಂದೆಯೇ ಭಾರತಕ್ಕೆ ಆಗಮಿಸಿದ್ದರು. ಈ ಬಾರಿ ಕ್ರೀಡಾಕೂಟದಲ್ಲಿ ಭಾರತದ 84 ಕ್ರೀಡಾಪಟುಗಳು ಪಾಲ್ಗೊಂಡಿದ್ದು, 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚು ಸೇರಿ ಒಟ್ಟು 29 ಪದಕ ಗೆದ್ದಿದ್ದಾರೆ. ಈ ಮೂಲಕ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಸಾರ್ವಕಾಲಿಕ ಗರಿಷ್ಠ ಪದಕಗಳ ದಾಖಲೆ ಅಳಿಸಿ ಹಾಕಿದ್ದಾರೆ. ಟೋಕಿಯೋದಲ್ಲಿ ಭಾರತಕ್ಕೆ 5 ಚಿನ್ನ ಸೇರಿ 19 ಪದಕ ಲಭಿಸಿತ್ತು.
ನಾಳೆ ಪ್ರಧಾನಿ ನರೇಂದ್ರ ಮೋದಿಯಿಂದ ಔತಣಕೂಟ
ಪ್ಯಾರಿಸ್‌ನಿಂದ ಆಗಮಿಸಿದ ಭಾರತದ ಕ್ರೀಡಾಪಟುಗಳು, ಕೋಚ್‌ಗಳು ಹಾಗೂ ಅಧಿಕಾರಿಗಳು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಲಿರುವ ಪ್ರಧಾನಿ, ಸಂವಾದವನ್ನೂ ನಡೆಸಲಿದ್ದಾರೆ.