ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದವರಿಗೆ ಕ್ರೀಡಾ ಇಲಾಖೆ ಕೊಟ್ಟ ನಗದು ಮೊತ್ತ ಎಷ್ಟು ಗೊತ್ತಾ?

| Published : Sep 11 2024, 01:10 AM IST / Updated: Sep 11 2024, 04:21 AM IST

ಸಾರಾಂಶ

ಪ್ಯಾರಿಸ್‌ನಿಂದ ಭಾರತಕ್ಕೆ ಮರಳಿದ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ ನೇತೃತ್ವದಲ್ಲಿ ಮಂಗಳವಾರ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ, ಚೆಕ್‌ ಹಸ್ತಾಂತರಿಸಲಾಯಿತು.

ನವದೆಹಲಿ: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಮಂಗಳವಾರ ನಗದು ಬಹುಮಾನ ವಿತರಿಸಿದೆ. ಪ್ಯಾರಿಸ್‌ನಿಂದ ಭಾರತಕ್ಕೆ ಮರಳಿದ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ವೇಳೆ ಮಾತನಾಡಿದ ಮಾಂಡವೀಯ ‘ಚಿನ್ನದ ಪದಕ ಗೆದ್ದವರಿಗೆ ತಲಾ ₹75 ಲಕ್ಷ, ಬೆಳ್ಳಿ ಪದಕ ವಿಜೇತರಿಗೆ ₹50 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ ₹30 ಲಕ್ಷ ನೀಡುತ್ತೇವೆ’ ಎಂದರು. ಅಲ್ಲದೆ, ಆರ್ಚರಿ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದ ಶೀತಲ್‌ ದೇವಿ ಹಾಗೂ ರಾಕೇಶ್‌ ಕುಮಾರ್‌ಗೆ ತಲಾ ₹22.5 ಲಕ್ಷ ಸಿಗಲಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಸುಮಿತ್‌ ಅಂತಿಲ್‌, ನವ್‌ದೀಪ್‌, ಪ್ರವೀಣ್‌ ಕುಮಾರ್‌, ಧರಂಭಿರ್‌ ನೈನ್‌, ಹರ್ವಿಂದರ್‌ ಸಿಂಗ್‌ ಸೇರಿ ಕೆಲ ಕ್ರೀಡಾಪಟುಗಳು ಕ್ರೀಡಾ ಸಚಿವರಿಂದ ಚೆಕ್‌ ಸ್ವೀಕರಿಸಿದರು. ಅವನಿ ಲೇಖರಾ ಸೇರಿದಂತೆ ಇತರ ಕೆಲ ಪದಕ ಸಾಧಕರಿಗೆ ಈಗಾಗಲೇ ಸನ್ಮಾನ ಮಾಡಲಾಗಿತ್ತು. ಹೀಗಾಗಿ ಅವರು ಮಂಗಳವಾರದ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ.

2028ಕ್ಕೆ ಸಿದ್ಧತೆ ಶುರು

2016ರಲ್ಲಿ ಕೇವಲ 4 ಪದಕ ಗೆದ್ದಿದ್ದ ಭಾರತ, 2020ರಲ್ಲಿ 19, ಈ ಬಾರಿ 29 ಪದಕ ಗೆದ್ದು 18ನೇ ಸ್ಥಾನ ಪಡೆದಿದೆ. 2028ರ ಲಾಸ್‌ ಏಂಜಲೀಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನಷ್ಟು ಪದಕ ಸಾಧನೆ ಮಾಡಲು ನಮ್ಮ ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರ, ಬೆಂಬಲ ನೀಡುತ್ತೇವೆ. ಅದಕ್ಕಾಗಿ ಈಗಲೇ ಸಿದ್ಧತೆ ಆರಂಭಿಸುತ್ತೇವೆ. ಭಾರತಕ್ಕೆ ಆತಿಥ್ಯ ಸಿಗುವ ಸಾಧ್ಯತೆಯಿರುವ 2036ರ ಒಲಿಂಪಿಕ್ಸ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುವುದು ನಮ್ಮ ಪ್ರಮುಖ ಗುರಿ.

ಮಾನ್ಸುಖ್‌ ಮಾಂಡವೀಯ, ಕೇಂದ್ರ ಕ್ರೀಡಾ ಸಚಿವ