ಸಾರಾಂಶ
ಕರಾಚಿ: 2025ರ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಿದ್ದ ಪಾಕಿಸ್ತಾನ ಟೂರ್ನಿಯಿಂದಾಗಿ ಭಾರೀ ಆರ್ಥಿಕ ನಷ್ಟಕ್ಕೆ ತುತ್ತಾಗಿದೆ. ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಪಂದ್ಯಾವಳಿಯಿಂದ 700 ಕೋಟಿ ರು. ನಷ್ಟ ಅನುಭವಿಸಿದೆ. ಈ ಬೆನ್ನಲ್ಲೇ ಆಟಗಾರರ ಶುಲ್ಕ ಮತ್ತು ಸೌಲಭ್ಯ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಟೂರ್ನಿಗೂ ಮುನ್ನ ಪಿಸಿಬಿ ₹500 ಕೋಟಿ ವೆಚ್ಚ ಮಾಡಿ 3 ಕ್ರೀಡಾಂಗಣಗಳನ್ನು ನವೀಕರಿಸಿತ್ತು. ನವೀಕರಣದ ವೆಚ್ಚವು ನಿರೀಕ್ಷಿತ ಬಜೆಟ್‌ಗಿಂತ ಶೇ.50ರಷ್ಟು ಹೆಚ್ಚಾಗಿತ್ತು. ಅಲ್ಲದೆ, ಟೂರ್ನಿಯ ಸಿದ್ಧತೆಗಾಗಿ ₹340 ಕೋಟಿ ಬಳಕೆ ಮಾಡಿತ್ತು. ಒಟ್ಟಾರೆ ₹869 ಕೋಟಿಯಷ್ಟು ಖರ್ಚು ಮಾಡಲಾಗಿತ್ತು. ಆದರೆ ಟಿಕೆಟ್ ಶುಲ್ಕ ಹಾಗೂ ಇನ್ನಿತರ ಮೂಲಗಳಿಂದ ಪಾಕಿಸ್ತಾನ ಸ್ವೀಕರಿಸಿದ್ದು 52 ಕೋಟಿ ರು.ಮಾತ್ರ. ಇದರೊಂದಿಗೆ ಟೂರ್ನಿಯ ಒಟ್ಟಾರೆ ಹೂಡಿಕೆಯಲ್ಲಿ ಪಾಕಿಸ್ತಾನ ಶೇ.85ರಷ್ಟು ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.
ಹೀಗಾಗಿಯೇ ಪಾಕ್ ರಾಷ್ಟ್ರೀಯ ಟ20 ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯ ಶುಲ್ಕವನ್ನು ಶೇ.90ರಷ್ಟು, ಮೀಸಲು ಆಟಗಾರರ ಪಾವತಿ ಶುಲ್ಕವನ್ನು ಶೇ.87.5ಕ್ಕೆ ಇಳಿಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲ್ಲದೇ ಆಟಗಾರರಿಗಿದ್ದ ಫೈವ್ ಸ್ಟಾರ್ ವಸತಿ ಸೌಕರ್ಯ ಕಡಿತಗೊಳಿಸಿ ಎಕಾನಮಿ ಹೋಟೆಲ್‌ಗಳಿಗೆ ಬದಲಿಸಿದೆ ಎನ್ನಲಾಗಿದೆ.