ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್‌ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯ

| Published : Sep 13 2024, 01:42 AM IST / Updated: Sep 13 2024, 04:12 AM IST

ಪ್ಯಾರಿಸ್‌ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್‌ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ. ಐತಿಹಾಸಿಕ ಸಾಧನೆ ಬಗ್ಗೆ ಶ್ಲಾಘನೆ. ಸಂವಾದ ನಡೆಸಿ, ಪ್ಯಾರಿಸ್‌ ಅನುಭವ ಕೇಳಿ ತಿಳಿದುಕೊಂಡ ಪ್ರಧಾನಿ. ಅಥ್ಲೀಟ್‌ಗಳಿಂದ ಮೋದಿಗೆ ರ್‍ಯಾಕೆಟ್‌, ಜೆರ್ಸಿ, ಕ್ಯಾಪ್‌ ಉಡುಗೊರೆ

ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದು, ಆತ್ಮೀಯ ಮಾತುಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. 

ಅಲ್ಲದೆ, ಭವಿಷ್ಯದಲ್ಲಿ ಭಾರತವನ್ನು ಕ್ರೀಡೆಯಲ್ಲಿ ಉತ್ತುಂಗಕ್ಕೆ ತಲುಪಿಸಬೇಕು ಎಂದು ಶುಭ ಹಾರೈಸಿದ್ದಾರೆ.ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡ 84 ಕ್ರೀಡಾಪಟುಗಳು, 50ಕ್ಕೂ ಹೆಚ್ಚಿನ ಕೋಚ್‌ಗಳು, ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರಧಾನಿ ನಿವಾಸದಲ್ಲಿ ಮೋದಿ ಅವರನ್ನು ಭೇಟಿಯಾದರು. ಕ್ರೀಡಾಪಟುಗಳ ಜೊತೆ ಬೆಳಗ್ಗಿನ ಉಪಾಹಾರ ಸೇವಿಸಿದ ಮೋದಿ, ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಸಂವಾದದಲ್ಲಿ ಪಾಲ್ಗೊಂಡರು.

ಪದಕ ವಿಜೇತರಾದ ಅವನಿ ಲೇಖರಾ, ನಿಶಾದ್‌ ಕುಮಾರ್‌, ಸುಮಿತ್‌ ಅಂತಿಲ್‌, ಶರದ್‌ ಕುಮಾರ್‌, ಶೀತಲ್‌ ದೇವಿ, ಮನೀಶ್‌ ನರ್ವಾಲ್‌, ಕರ್ನಾಟಕದ ರಕ್ಷಿತಾ ರಾಜು, ಸುಹಾಸ್‌ ಯತಿರಾಜ್‌ ಸೇರಿ ಹಲವರ ಜೊತೆ ಪ್ರಧಾನಿ ಸಂಭಾಷಣೆ ನಡೆಸಿದರು. 

ಪ್ಯಾರಿಸ್‌ ಗೇಮ್ಸ್‌ಗೆ ಮಾಡಿದ್ದ ತಯಾರಿ, ಕ್ರೀಡಾ ಗ್ರಾಮದ ಆತಿಥ್ಯ, ಪದಕ ಗೆದ್ದಾಗ ಉಂಟಾದ ಸಂತೋಷ, ಗೇಮ್ಸ್‌ ವೇಳೆ ಉಂಟಾದ ವಿಶೇಷ ಅನುಭವಗಳನ್ನು ಮೋದಿ ಕೇಳಿ ತಿಳಿದುಕೊಂಡರು. ಪದಕ ವಿಜೇತರನ್ನು ಶ್ಲಾಘಿಸಿದ ಅವರು, ಪದಕ ತಪ್ಪಿದರೂ ಉತ್ತಮ ಪ್ರದರ್ಶನ ತೋರಿದ ಕ್ರೀಡಾಪಟುಗಳನ್ನು ಹುರಿದುಂಬಿಸಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು. 

ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ, ಭಾರತೀಯ ಪ್ಯಾರಾಲಿಂಪಿಕ್‌ ಸಂಸ್ಥೆ ಅಧ್ಯಕ್ಷ ದೇವೇಂದ್ರ ಝಝಾರಿಯಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.ಈ ಬಾರಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚು ಸೇರಿದಂತೆ ಒಟ್ಟು 29 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಟೋಕಿಯೋದಲ್ಲಿ 19 ಪದಕ ಜಯಿಸಿದ್ದ ಭಾರತೀಯ ಕ್ರೀಡಾಪಟುಗಳು, ಈ ಬಾರಿ ಹೆಚ್ಚುವರಿ 10 ಪದಕ ಗೆದ್ದು ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.