ಸಾರಾಂಶ
ನವದೆಹಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತೀಯ ಕ್ರೀಡಾಪಟುಗಳ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತಮ್ಮ ನಿವಾಸದಲ್ಲಿ ಸಂವಾದ ನಡೆಸಿದರು.
ಸಂವಾದಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕದ ರಕ್ಷಿತಾ ರಾಜು ಜೊತೆಗೂ ಮಾತನಾಡಿ, ಪ್ಯಾರಿಸ್ ಅನುಭವಗಳನ್ನು ಕೇಳಿ ತಿಳಿದುಕೊಂಡರು. ‘ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದೆ. ಆದರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. 2028ರ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಖಂಡಿತಾ ಪದಕ ಗೆಲ್ಲುತ್ತೇನೆ ಸರ್. ನೀವು ನಮಗೆ ನೀಡುತ್ತಿರುವ ಬೆಂಬಲಕ್ಕೆ ಧನ್ಯವಾದಗಳು’ ಎಂದು ರಕ್ಷಿತಾ ಹೇಳಿದರು.
ಈ ವೇಳೆ ರಕ್ಷಿತಾರನ್ನು ಮೋದಿ ಅಭಿನಂದಿಸಿ, ಮುಂದಿನ ಸಲ ಪದಕ ಗೆದ್ದು ಬನ್ನಿ ಎಂದು ಶುಭ ಹಾರೈಸಿದರು. ಪ್ಯಾರಿಸ್ ಗೇಮ್ಸ್‌ನಲ್ಲಿ ಮಹಿಳೆಯರ 1500 ಮೀ. ಟಿ11 ವಿಭಾಗದಲ್ಲಿ ಸ್ಪರ್ಧಿಸಿದ್ದ ರಕ್ಷಿತಾ ಪದಕ ಗೆಲ್ಲಲು ವಿಫಲರಾಗಿದ್ದರು.
ರ್‍ಯಾಕೆಟ್, ಜೆರ್ಸಿ ಗಿಫ್ಟ್; ಪದಕಕ್ಕೆ ಅಟೋಗ್ರಾಫ್
ಸಮಾರಂಭದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳು ಪೈಕಿ ಕೆಲವರು ಮೋದಿಗೆ ವಿಶೇಷ ಉಡುಗೊರೆ ನೀಡಿದರು. ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ತಮ್ಮ ಬ್ಯಾಡ್ಮಿಂಟನ್ ರ್‍ಯಾಕೆಟ್‌ನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು. ಶೂಟರ್ ಅವನಿ ಲೇಖರಾ ತಮ್ಮ ಕೈ ಗ್ಲೌಸ್ ಹಾಗೂ ‘ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಬರೆಯಲಾಗಿದ್ದ ಜೆರ್ಸಿಯನ್ನು ನೀಡಿದರು. ಜುಡೊ ಸ್ಪರ್ಧೆಯಲ್ಲಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದ ಕಪಿಲ್ ಪಾರ್ಮರ್ ಪದಕದ ಮೇಲೆ ಪ್ರಧಾನಿ ಮೋದಿ ಅವರು ತಮ್ಮ ಸಹಿ ಹಾಕಿದರು.
ನೆಲದ ಮೇಲೆ ಕುಳಿತು ಕ್ಯಾಪ್ ಪಡೆದ ಮೋದಿ
ಜಾವೆಲಿನ್ ಎಸೆತದಲ್ಲಿ ಚಿನ್ನ ಗೆದ್ದಿದ್ದ ನವ್‌ದೀಪ್ ಸಿಂಗ್ ಕೂಡಾ ಸಮಾರಂಭದ ವೇಳೆ ಪ್ರಧಾನಿ ಮೋದಿಯನ್ನು ವೈಯಕ್ತಿಕವಾಗಿ ಭೇಟಿಯಾದರು. ಈ ವೇಳೆ ತಮ್ಮ ವಿಶೇಷ ಕ್ಯಾಪ್‌ಅನ್ನು ಪ್ರಧಾನಿ ನೀಡಲು ಮುಂದಾದರು. ಆಗ ಮೋದಿ ನೆಲದಲ್ಲಿ ಕುಳಿತು, ಕ್ಯಾಪ್‌ಅನ್ನು ನವ್‌ದೀಪ್‌ರ ಕೈಯಿಂದಲೇ ತಮ್ಮ ತಲೆಗೆ ಹಾಕಿಸಿದರು. ಬಳಿಕ ಎದ್ದುನಿಂತ ಪ್ರಧಾನಿ, ನವ್‌ದೀಪ್ ಜೆರ್ಸಿ ಮೇಲೆ ತಮ್ಮ ಸಹಿ ಹಾಕಿದರು. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.