ಪಂದ್ಯದ ವೇಳೆ ಕುಸಿದ ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದ ಸ್ಟ್ಯಾಂಡ್‌! 10 ಮಂದಿಗೆ ಗಾಯ

| Published : Jul 24 2024, 12:30 AM IST / Updated: Jul 24 2024, 04:15 AM IST

ಸಾರಾಂಶ

ಘಟನೆಯಲ್ಲಿ 10 ಮಂದಿಗೆ ಗಾಯ. ಸ್ಟ್ಯಾಂಡ್ ಕುಸಿತದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌. ರಾಜ್ಯ ಸಂಸ್ಥೆಯ ಕ್ರೀಡಾಂಗಣ ನಿರ್ವಹಣೆ ವಿರುದ್ಧ ಭಾರೀ ಆಕ್ರೋಶ.

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆಎಸ್‌ಎಫ್‌ಎ)ಯ ಬೆಂಗಳೂರಿನ ಫುಟ್ಟಾಲ್‌ ಕ್ರೀಡಾಂಗಣದ ಸ್ಟ್ಯಾಂಡ್‌ ಪಂದ್ಯದ ನಡುವೆಯೇ ಕುಸಿತ ಘಟನೆ ಭಾನುವಾರ ನಡೆದಿದೆ. ಮುಖ್ಯಮಂತ್ರಿ ಕಪ್‌ ಫುಟ್ಬಾಲ್‌ ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಈ ಘಟನೆ ಸಂಭವಿಸಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶಾಂತಿ ನಗರ ಹಾಗೂ ಸಿವಿ ರಾಮನ್‌ ನಗರ ತಂಡಗಳ ನಡುವಿನ ಫೈನಲ್‌ ಪಂದ್ಯದ 30ನೇ ನಿಮಿಷದಲ್ಲಿ ಕ್ರೀಡಾಂಗಣದ ಒಂದು ಭಾಗ ಕುಸಿದಿದೆ. ಈ ವೇಳೆ ಸ್ಟ್ಯಾಂಡ್‌ನಲ್ಲಿ ಕೆಲ ಪ್ರೇಕ್ಷಕರಿದ್ದರು. ಸ್ಟ್ಯಾಂಡ್‌ ಕುಸಿತದ ಸಂದರ್ಭ ಅವರೂ ಕೆಳಕ್ಕೆ ಬಿದ್ದಿದ್ದಾರೆ. 

ಕೂಡಲೇ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.ಪಂದ್ಯದ ವೇಳೆ ಸ್ಟ್ಯಾಂಡ್‌ ಕುಸಿತದ ಆಘಾತಕಾರಿ ಘಟನೆ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯು ಕ್ರೀಡಾಂಗಣವನ್ನು ನಿರ್ವಹಿಸುತ್ತಿರುವ ರೀತಿಗೆ ಹಲವು ಕ್ರೀಡಾಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರೀಡಾಂಗಣದ ಹಲವು ಭಾಗಗಳು ಕೂಡಾ ನಿರ್ವಹಣೆಯಿಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿದೆ. ಕೆಲವೆಡೆ ಕಸ ತುಂಬಿದ್ದು, ಸ್ಟ್ಯಾಂಡ್‌ಗಳು ಕೂಡಾ ಕುಸಿಯುವ ಭೀತಿಯಲ್ಲಿದೆ. ಆಸನಗಳು ಕೂಡಾ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ. ಈ ಸಂಬಂಧ ಕೆಎಸ್‌ಎಫ್‌ಎ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.