ಡೆಲ್ಲಿ ಕ್ಯಾಪಿಟಲ್ಸ್‌ ಚಾಲೆಂಜ್‌ ಗೆದ್ದು ಪಂಜಾಬ್‌ ಕಿಂಗ್ಸ್‌ ಶುಭಾರಂಭ

| Published : Mar 24 2024, 01:34 AM IST / Updated: Mar 24 2024, 12:50 PM IST

ಡೆಲ್ಲಿ ಕ್ಯಾಪಿಟಲ್ಸ್‌ ಚಾಲೆಂಜ್‌ ಗೆದ್ದು ಪಂಜಾಬ್‌ ಕಿಂಗ್ಸ್‌ ಶುಭಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಪಂಜಾಬ್‌ ಕಿಂಗ್ಸ್‌ಗೆ 4 ವಿಕೆಟ್‌ ಗೆಲುವು. ಕೊನೆಯಲ್ಲಿ ಅಭಿಷೇಕ್‌ ಪೊರೆಲ್‌ ಇಂಪ್ಯಾಕ್ಟ್‌ ಆಟ, ಡೆಲ್ಲಿ 9 ವಿಕೆಟ್‌ಗೆ 174 ರನ್‌. ಕಮ್‌ಬ್ಯಾಕ್ ಪಂದ್ಯದಲ್ಲಿ ರಿಷಭ್‌ ಪಂತ್‌ 18. ಪಂಜಾಬ್‌ಗೆ ಸ್ಯಾಮ್‌ ಕರ್ರನ್‌, ಲಿವಿಂಗ್‌ಸ್ಟೋನ್‌ ಆಸರೆ. 19.2 ಓವರಲ್ಲಿ 6 ವಿಕೆಟ್‌ಗೆ 177 ರನ್‌

ಮುಲ್ಲಾನ್ಪುರ(ಚಂಡೀಗಢ): ಸ್ಯಾಮ್‌ ಕರ್ರನ್‌ರ ಅಭೂತಪೂರ್ವ ಆಟದಿಂದಾಗಿ 17ನೇ ಆವೃತ್ತಿ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಭರ್ಜರಿ ಶುಭಾರಂಭ ಮಾಡಿದೆ. 

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಶಿಖರ್‌ ಧವನ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂಜಾಬ್‌ 4 ವಿಕೆಟ್‌ ಜಯಭೇರಿ ಬಾರಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಮಧ್ಯಮ ಕ್ರಮಾಂಕದ ವೈಫಲ್ಯದ ಹೊರತಾಗಿಯೂ ಕೊನೆಯಲ್ಲಿ ಅಭಿಷೇಕ್‌ ಪೊರೆಲ್‌ ಪ್ರದರ್ಶಿಸಿದ ಹೋರಾಟದಿಂದಅಗಿ 9 ವಿಕೆಟ್‌ಗೆ 174 ರನ್‌ ಕಲೆಹಾಕಿತು. 

ಗುರಿ ದೊಡ್ಡದಿದ್ದರೂ ಡೆಲ್ಲಿ ಬೌಲರ್ಸ್‌ಗೆ ಪಂಜಾಬ್‌ಅನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ. ಆರಂಭಿಕದ ವೈಫಲ್ಯ ಮೆಟ್ಟಿನಿಂತ ತಂಡ 19.2 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

ಉತ್ತಮ ಆರಂಭದ ಮುನ್ಸೂಚನೆ ನೀಡಿದ್ದ ಧವನ್‌(22) ಹಾಗೂ ಜಾನಿ ಬೇರ್‌ಸ್ಟೋವ್‌(09) ಇಬ್ಬರೂ 4ನೇ ಓವರಲ್ಲಿ ಪೆವಿಲಿಯನ್‌ಗೆ ಮರಳಿದಾಗ ತಂಡದ ಮೊತ್ತ 42. ಬಳಿಕ ಕರ್ರನ್‌ಗೆ ಜೊತೆಯಾದ ಪ್ರಭ್‌ಸಿಮ್ರನ್(26) ತಂಡವನ್ನು ಮೇಲೆತ್ತಿದರು.

ಪ್ರಭ್‌ಸಿಮ್ರನ್‌ ಬೆನ್ನಲ್ಲೇ ಜಿತೇಶ್‌ ಶರ್ಮಾ ಕೂಡಾ ಔಟಾದರು. ಆದರೆ 5ನೇ ವಿಕೆಟ್‌ಗೆ ಜೊತೆಯಾದ ಲಿವಿಂಗ್‌ಸ್ಟೋನ್‌-ಕರ್ರನ್‌ 67 ರನ್‌ ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 

47 ಎಸೆತಗಳಲ್ಲಿ 63 ರನ್‌ ಸಿಡಿಸಿದ ಕರ್ರನ್‌ ಗೆಲುವಿನ ಅಂಚಿನಲ್ಲಿ ಔಟಾದರೆ, ಲಿವಿಂಗ್‌ಸ್ಟೋನ್‌(ಔಟಾಗದೆ 38) ಸಿಕ್ಸರ್‌ ಮೂಲಕ ಗೆಲುವಿನ ದಡ ತಲುಪಿಸಿದರು.

ಪೊರೆಲ್‌ ಅಬ್ಬರ: ಇದಕ್ಕೂ ಮುನ್ನ ಆರಂಭದಲ್ಲೇ ಅಬ್ಬರಿಸಲು ಶುರುವಿಟ್ಟ ಡೆಲ್ಲಿ ಪವರ್‌ಪ್ಲೇ ಮುಕ್ತಾಯಕ್ಕೆ 54 ರನ್‌ ಗಳಿಸಿತು. ಆದರೆ ಯಾವ ಬ್ಯಾಟರ್‌ ಕೂಡಾ ದೊಡ್ಡ ಇನ್ನಿಂಗ್ಸ್‌ ಕಟ್ಟಲಿಲ್ಲ. 

ವಾರ್ನರ್‌ 29, ಮಿಚೆಲ್‌ ಮಾರ್ಷ್‌ 20, ಶಾಯ್‌ ಹೋಪ್‌ 33, ರಿಷಭ್‌ ಪಂತ್‌ 18 ರನ್‌ಗೆ ನಿರ್ಗಮಿಸಿದರು. ಕೊನೆಯಲ್ಲಿ ಇಂಪ್ಯಾಕ್ಟ್‌ ಆಟಗಾರನಾಗಿ ಕ್ರೀಸ್‌ಗಿಳಿಸಿದ ಅಭಿಷೇಕ್‌ ಪೊರೆಲ್‌(10 ಎಸೆತಗಳಲ್ಲಿ ಔಟಾಗದೆ 32) ಹರ್ಷಲ್‌ ಪಟೇಲ್‌ರ ಕೊನೆ ಓವರಲ್ಲಿ 25 ರನ್‌ ಸಿಡಿಸಿ ತಂಡವನ್ನು 170ರ ಗಡಿ ದಾಟಿಸಿದರು.

ಸ್ಕೋರ್: ಡೆಲ್ಲಿ 20 ಓವರಲ್ಲಿ 174/9 (ಹೋಪ್‌ 33, ಪೊರೆಲ್‌ 32*, ಅರ್ಶ್‌ದೀಪ್‌ 2-28), ಪಂಜಾಬ್‌ 19.2 ಓವರಲ್ಲಿ 177/6 (ಕರ್ರನ್‌ 63, ಲಿವಿಂಗ್‌ಸ್ಟೋನ್‌ 38*, ಕುಲ್ದೀಪ್‌ 2-20)

ವೆಲ್‌ಕಂ ಬ್ಯಾಕ್ ರಿಷಭ್‌: 2022ರ ಡಿಸೆಂಬರ್‌ನಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದ ರಿಷಭ್‌ ಪಂತ್‌ 15 ತಿಂಗಳ ಬಳಿಕ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದರು. 

ಭಾರೀ ನಿರೀಕ್ಷೆ ಹುಟ್ಟಿಸಿದ್ದ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದಿದ್ದರೂ ತಮ್ಮ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಕಳೆದ ವರ್ಷ ರಿಷಭ್ ಅನುಪಸ್ಥಿತಿಯಲ್ಲಿ ಡೇವಿಡ್‌ ವಾರ್ನರ್‌ ಡೆಲ್ಲಿಯನ್ನು ಮುನ್ನಡೆಸಿದ್ದರು.

ಮುಲ್ಲಾನ್‌ಪುರದಲ್ಲಿ ಮೊದಲ ಐಪಿಎಲ್‌ ಪಂದ್ಯ: ಚಂಡೀಗಢದ ಮುಲ್ಲಾನ್‌ಪುರದಲ್ಲಿ ನಿರ್ಮಾಣಗೊಂಡ ನೂತನ ಕ್ರೀಡಾಂಗಣ ಮೊದಲ ಬಾರಿ ಐಪಿಎಲ್‌ ಪಂದ್ಯಕ್ಕೆ ಆತಿಥ್ಯ ವಹಿಸಿತು. 

ಮೊಹಾಲಿಯ ಹೊರಭಾಗದಲ್ಲಿ 40 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡಿದ್ದು, ಇನ್ನಷ್ಟೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯಬೇಕಿದೆ. 2021ರಿಂದ ಈ ಕ್ರೀಡಾಂಗಣದಲ್ಲಿ ಹಲವು ದೇಸಿ ಪಂದ್ಯಗಳು ಆಯೋಜನೆಗೊಂಡಿವೆ.

06ನೇ ಜಯ: ಐಪಿಎಲ್‌ನ ಕಳೆದ 7 ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಪಂಜಾಬ್‌ಗಿದು 6ನೇ ಗೆಲುವು.

01ನೇ ಬ್ಯಾಟರ್‌: ಐಪಿಎಲ್‌ನಲ್ಲಿ 900+ ಬೌಂಡರಿ ಬಾರಿಸಿದ ಏಕೈಕ ಬ್ಯಾಟರ್‌ ಶಿಖರ್‌ ಧವನ್‌. ಕೊಹ್ಲಿ ಸದ್ಯ 898 ಬೌಂಡರಿ ಬಾರಿಸಿದ್ದಾರೆ.