ಕಾನ್ಪುರ: ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟ ಮಳೆಗೆ ಬಲಿ

| Published : Sep 29 2024, 01:30 AM IST / Updated: Sep 29 2024, 04:18 AM IST

ಸಾರಾಂಶ

ಭಾರತ-ಬಾಂಗ್ಲಾದೇಶ 2ನೇ ಟೆಸ್ಟ್‌ನ 2ನೇ ದಿನದಾಟ ಮಳೆಗೆ ಬಲಿ. ತುಂತುರು ಮಳೆಯಿಂದಾಗಿ ದಿನದಾಟದ ಆರಂಭ ವಿಳಂಬ. ಬೆಳಗ್ಗೆ 10.40ರ ವೇಳೆಗೆ ಹೋಟೆಲ್‌ಗೆ ವಾಪಸಾದ ಆಟಗಾರರು. ಪಂದ್ಯದಲ್ಲಿ ಇನ್ನು 3 ದಿನ ಬಾಕಿ. ಫಲಿತಾಂಶದ ನಿರೀಕ್ಷೆಯಲ್ಲಿ ಭಾರತ.

ಕಾನ್ಪುರ: ಭಾರತ-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ ಪಂದ್ಯದ 2ನೇ ದಿನದಾಟ ಮಳೆಗೆ ಬಲಿಯಾಯಿತು. ನಗರದಲ್ಲಿ ಬೆಳಗ್ಗಿನಿಂದಲೇ ತುಂತುರು ಮಳೆ ಬೀಳುತ್ತಿದ್ದ ಕಾರಣ, ದಿನದಾಟ ಆರಂಭಗೊಳ್ಳುವುದು ವಿಳಂಬವಾಯಿತು. ಆಟ ಆರಂಭಗೊಳ್ಳಬಹುದು ಎನ್ನುವ ನಿರೀಕ್ಷೆಯೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ ಉಭಯ ತಂಡಗಳ ಆಟಗಾರರಿಗೆ ನಿರಾಸೆ ಉಂಟಾಯಿತು.

ಸುಮಾರು 10 ಗಂಟೆಯ ವೇಳೆಗೆ ಮಳೆ ಜೋರಾದ ಕಾರಣ, 10.40ರ ವೇಳೆಗೆ ಆಟಗಾರರು ಹೋಟೆಲ್‌ಗೆ ವಾಪಸಾದರು. ಆ ಬಳಿಕ ಮಳೆ ಕಡಿಮೆಯಾದ ಕಾರಣ, ಬೆಳಗ್ಗೆ 11.15ರ ವೇಳಗೆ ಮೈದಾನ ಸಿಬ್ಬಂದಿ ಮೂರು ಸೂಪರ್‌ ಸಾಪರ್‌ ಯಂತ್ರಗಳನ್ನು ಬಳಸಿ ಮೈದಾನ ಒಣಗಿಸುವ ಕೆಲಸ ಆರಂಭಿಸಿದರು.

ಆದರೂ ಸಣ್ಣಗೆ ಮಳೆ ಬೀಳುತ್ತಲೇ ಇದ್ದಿದ್ದರಿಂದ ಹಾಗೂ ಮಂದ ಬೆಳಕು ಇದ್ದ ಕಾರಣ ಮಧ್ಯಾಹ್ನ 2.15ರ ವೇಳೆಗೆ ಅಂಪೈರ್‌ಗಳು ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಿದರು.3 ದಿನದಲ್ಲಿ ಗೆಲ್ಲಬೇಕಾದ ಒತ್ತಡ: 3ನೇ ದಿನವಾದ ಭಾನುವಾರವೂ ಮಳೆ ಮುನ್ಸೂಚನೆ ಇದ್ದು, ಪಂದ್ಯ ಡ್ರಾನತ್ತ ಹೊರಳಬಹುದು ಎನ್ನುವ ಆತಂಕ ಭಾರತೀಯರಿಗೆ ಶುರುವಾಗಿದೆ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಜೊತೆಗೆ ಸತತ 3ನೇ ಬಾರಿಗೆ ಫೈನಲ್‌ಗೇರುವ ಗುರಿ ಹೊಂದಿರುವ ಭಾರತಕ್ಕೆ ಮುಂದಿನ ಮೂರುವರೆ ತಿಂಗಳ ಕಾಲ ನಡೆಯಲಿರುವ ಪಂದ್ಯಗಳು ಅತ್ಯಂತ ಮಹತ್ವದೆನಿಸಿವೆ.

ಪಂದ್ಯ ಗೆದ್ದರೆ 12 ಅಂಕಗಳು ಸಿಗಲಿದ್ದು, ಒಂದು ವೇಳೆ ಪಂದ್ಯ ಡ್ರಾಗೊಂಡರೆ ಭಾರತಕ್ಕೆ ಕೇವಲ 4 ಅಂಕ ಸಿಗಲಿದೆ. ಈ ಪಂದ್ಯದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ 3 ಟೆಸ್ಟ್‌ಗಳನ್ನು ಆಡಲಿದೆ. ಆನಂತರ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್‌ಗಳು ನಿಗದಿಯಾಗಿವೆ. ಭಾರತ ಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳಲು ಈ ಪಂದ್ಯವನ್ನೂ ಸೇರಿ ಬಾಕಿ ಇರುವ 9 ಪಂದ್ಯಗಳಲ್ಲಿ ಕನಿಷ್ಠ 5 ರಿಂದ 6 ಪಂದ್ಯಗಳನ್ನು ಗೆಲ್ಲಬೇಕಾಗಬಹುದು.