ರಾಜಸ್ಥಾನಕ್ಕೆ ಪ್ರಸಿದ್ಧ್‌ ಕೃಷ್ಣ ಬದಲು ಕೇಶವ್‌ ಮಹಾರಾಜ್‌

| Published : Mar 29 2024, 12:47 AM IST

ಸಾರಾಂಶ

ದಕ್ಷಿಣ ಆಫ್ರಿಕಾದ ಕೇಶವ್‌ ಮಾರ್ಚ್‌ ಆರಂಭದಲ್ಲೇ ಭಾರತಕ್ಕೆ ಆಗಮಿಸಿದ್ದರು. ಇದುವರೆಗೆ ಅವರು ಲಖನೌ ತಂಡದ ಜೊತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.

ನವದೆಹಲಿ: ಗಾಯದಿಂದಾಗಿ 17ನೇ ಆವೃತ್ತಿ ಐಪಿಎಲ್‌ನಿಂದ ಹೊರಬಿದ್ದಿರುವ ಕರ್ನಾಟಕದ ವೇಗಿ ಪ್ರಸಿದ್ಧ್‌ ಕೃಷ್ಣ ಬದಲು ರಾಜಸ್ಥಾನ ರಾಯಲ್ಸ್ ತಂಡ ದ.ಆಫ್ರಿಕಾದ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೇಶವ್‌ ಮಾರ್ಚ್‌ ಆರಂಭದಲ್ಲೇ ಭಾರತಕ್ಕೆ ಆಗಮಿಸಿದ್ದು, ಲಖನೌ ತಂಡದ ಜೊತೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇದೇ ವೇಳೆ ಕೋಲ್ಕತಾ ತಂಡ ಮುಜೀಬ್‌ ಬದಲು 16 ವರ್ಷದ ಅಲ್ಲಾ ಘಜಾನ್ಫರ್‌ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಘಜಾನ್ಫರ್‌ ಅಫ್ಘಾನಿಸ್ತಾನ ಪರ 2 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್‌ ಉದ್ಘಾಟನಾ ಪಂದ್ಯ 16.8 ಕೋಟಿ ವೀಕ್ಷಣೆ: ದಾಖಲೆ

ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನ ಚೆನ್ನೈ ಹಾಗೂ ಆರ್‌ಸಿಬಿ ನಡುವಿನ ಉದ್ಘಾಟನಾ ಪಂದ್ಯವನ್ನು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ 16.8 ಕೋಟಿ ಮಂದಿ ವೀಕ್ಷಿಸಿದ್ದಾರೆ. ಇದು ಈ ವರೆಗಿನ ಐಪಿಎಲ್‌ನ ಆರಂಭಿಕ ಪಂದ್ಯಗಳ ಪೈಕಿ ಗರಿಷ್ಠ ಎಂದು ಟೂರ್ನಿಯ ಅಧಿಕೃತ ಪ್ರಸಾರಕ ಸಂಸ್ಥೆ ಸ್ಟಾರ್‌ಸ್ಪೋರ್ಟ್‌ ತಿಳಿಸಿದೆ. ಅತಿ ಹೆಚ್ಚು ನಿಮಿಷಗಳ ಕಾಲ ವೀಕ್ಷಿಸಿದ ಪಂದ್ಯ ಎಂಬ ದಾಖಲೆಯೂ ನಿರ್ಮಾಣವಾಗಿದೆ. ಪಂದ್ಯವನ್ನು ಏಕಕಾಲಕ್ಕೆ 6.1 ಕೋಟಿ ಮಂದಿ ವೀಕ್ಷಿಸಿದ್ದು ಕೂಡಾ ದಾಖಲೆ. ಇನ್ನು, ಉದ್ಘಾಟನಾ ಪಂದ್ಯವನ್ನು ಜಿಯೋ ಸಿನಿಮಾದಲ್ಲಿ 11.3 ಕೋಟಿ ಜನರಿಂದ ಪಂದ್ಯ ವೀಕ್ಷಿಸಿದ್ದಾರೆ. ಇದು ಕಳೆದ ಬಾರಿಗೆ ಹೋಲಿಸಿದರೆ ಶೇ.51ರಷ್ಟು ಹೆಚ್ಚು ಎಂದು ಜಿಯೋ ಸಿನಿಮಾ ತಿಳಿಸಿದೆ.