ರಾಜಸ್ಥಾನದ ರಾಯಲ್‌ ಆಟಕ್ಕೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್‌!

| Published : Mar 29 2024, 12:49 AM IST / Updated: Mar 29 2024, 12:11 PM IST

ರಾಜಸ್ಥಾನದ ರಾಯಲ್‌ ಆಟಕ್ಕೆ ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್‌!
Share this Article
  • FB
  • TW
  • Linkdin
  • Email

ಸಾರಾಂಶ

ಡೆಲ್ಲಿ ವಿರುದ್ಧ 12 ರನ್‌ ಜಯ. ರಿಯಾನ್‌ ಸ್ಫೋಟಕ 84, ರಾಜಸ್ಥಾನ 5 ವಿಕೆಟ್‌ಗೆ 185 ರನ್‌. ರಾಯಲ್ಸ್‌ ಬೌಲರ್ಸ್‌ ಬಿಗು ದಾಳಿ, ಡೆಲ್ಲಿ 173/5. ರಿಷಭ್‌ ಪಡೆಗೆ ಸತತ 2ನೇ ಸೋಲು.

ಜೈಪುರ: ದೇಸಿ ಟೂರ್ನಿಗಳ ಬಳಿಕ ತಮ್ಮ ಸ್ಫೋಟಕ ಆಟವನ್ನು ಐಪಿಎಲ್‌ನಲ್ಲೂ ಮುಂದುವರಿಸಿದ ಯುವ ಬ್ಯಾಟರ್‌ ರಿಯಾನ್‌ ಪರಾಗ್‌ 17ನೇ ಆವೃತ್ತಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಗೆಲುವು ತಂದುಕೊಟ್ಟಿದ್ದಾರೆ. 

ನಿಧಾನ ಆರಂಭದ ಹೊರತಾಗಿಯೂ ಪೇರಿಸಿದ ಬೃಹತ್‌ ಮೊತ್ತ, ಬೌಲರ್‌ಗಳ ಸಂಘಟಿತ ದಾಳಿಯಿಂದಾಗಿ ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಜಸ್ಥಾನಕ್ಕೆ 12 ರನ್‌ ಗೆಲುವು ಲಭಿಸಿತು. ರಾಜಸ್ಥಾನಕ್ಕೆ ಇದು ಸತತ 2ನೇ ಗೆಲುವಾದರೆ, ಡೆಲ್ಲಿಗಿದು ಸತತ 2ನೇ ಸೋಲು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ರಿಯಾನ್‌ ಪರಾಗ್‌ ಸ್ಫೋಟಕ ಆಟದಿಂದಾಗಿ 20 ಓವರಲ್ಲಿ 5 ವಿಕೆಟ್‌ಗೆ 185 ರನ್‌ ಕಲೆಹಾಕಿತು. ಬೃಹತ್‌ ಮೊತ್ತ ಬೆನ್ನತ್ತಿದ ಸ್ಟಬ್ಸ್‌ ಹೋರಾಟದ ಹೊರತಾಗಿಯೂ 5 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಡೆಲ್ಲಿ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟರೂ 4ನೇ ಓವರ್‌ನಲ್ಲಿ ಮಿಚೆಲ್‌ ಮಾರ್ಷ್‌(23), ರಿಕ್ಕಿ ಭುಯಿ(00) ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. 

ಪವರ್‌-ಪ್ಲೇ ಮುಕ್ತಾಯಕ್ಕೆ ತಂಡದ ಸ್ಕೋರ್‌ 59. ಆದರೆ 34 ಎಸೆತಗಳಲ್ಲಿ 49 ರನ್‌ ಸಿಡಿಸಿದ ಡೇವಿಡ್‌ ವಾರ್ನರ್‌ರನ್ನು ಆವೇಶ್‌ ಪೆವಿಲಿಯನ್‌ಗೆ ಅಟ್ಟಿದರೆ, ರಿಷಭ್‌ ಪಂತ್‌ರನ್ನು(28) ಚಹಲ್‌ ಔಟ್‌ ಮಾಡಿದರು. 

16 ಓವರಲ್ಲಿ 5 ವಿಕೆಟ್‌ಗೆ 126 ರನ್‌ ಗಳಿಸಿದ್ದ ತಂಡಕ್ಕೆ ಕೊನೆ 24 ಎಸೆತದಲ್ಲಿ 60 ರನ್‌ ಬೇಕಿತ್ತು. ಈ ವೇಳೆ ಟ್ರಿಸ್ಟನ್‌ ಸ್ಟಬ್ಸ್‌(23 ಎಸೆತಗಳಲ್ಲಿ ಔಟಾಗದೆ 44) ಹೋರಾಟ ಪ್ರದರ್ಶಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ರಿಯಾನ್‌ ಶೋ: ರಾಜಸ್ಥಾನ ಕಳಪೆ ಆರಂಭ ಪಡೆದಿತ್ತು. ತಾರಾ ಬ್ಯಾಟರ್‌ಗಳಾದ ಯಶಸ್ವಿ ಜೈಸ್ವಾಲ್‌(05), ಜೋಸ್‌ ಬಟ್ಲರ್‌(11), ಸ್ಯಾಮ್ಸನ್‌(15) ತಂಡದ ಮೊತ್ತ 36 ಆಗುವಷ್ಟರಲ್ಲೇ ಪೆವಿಲಿಯನ್‌ ಸೇರಿದ್ದರು. ಬಡ್ತಿ ಪಡೆದು ಬಂದ ಅಶ್ವಿನ್‌ 29 ರನ್‌ ಗಳಿಸಿದರು. 

10 ಓವರಲ್ಲಿ ತಂಡ ಕೇವಲ 57 ರನ್‌ ಗಳಿಸಿತ್ತು. ಆದರೆ ರಿಯಾನ್‌ ಪರಾಗ್‌ರ ಆಟ ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿ ಬಿಟ್ಟಿತು. ಮೊದಲ 26 ಎಸೆತಗಳಲ್ಲಿ 26 ರನ್‌ ಗಳಿಸಿದ್ದ ರಿಯಾನ್, ಬಳಿಕ ಸ್ಫೋಟಕ ಆಟವಾಡಿ 45 ಎಸೆತಗಳಲ್ಲಿ ಒಟ್ಟು 84 ರನ್‌ ಸಿಡಿಸಿದರು. ಧ್ರುವ್‌ ಜುರೆಲ್‌ 20, ಹೇಟ್ಮೇಯರ್‌ 14 ರನ್ ಕೊಡುಗೆ ನೀಡಿದರು.

ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 185/5 (ಪರಾಗ್‌ 84, ಅಶ್ವಿನ್‌ 29, ಅಕ್ಷರ್‌ 1-21), ಡೆಲ್ಲಿ 20 ಓವರಲ್ಲಿ 173/5 (ವಾರ್ನರ್‌ 49, ಸ್ಟಬ್ಸ್‌ 44, ಚಹಲ್‌ 2-19) ಪಂದ್ಯಶ್ರೇಷ್ಠ: ರಿಯಾನ್‌ ಪರಾಗ್‌

ಐಪಿಎಲ್‌ನಲ್ಲಿ 100 ಪಂದ್ಯ ಆಡಿದ ಅತಿಕಿರಿಯ ಪರಾಗ್‌
ರಾಜಸ್ಥಾನ ಬ್ಯಾಟರ್‌ ರಿಯಾನ್‌ ಪರಾಗ್‌ ಐಪಿಎಲ್‌ನಲ್ಲಿ 100 ಪಂದ್ಯಗಳನ್ನಾಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು. ಪರಾಗ್‌ಗೆ ಈಗ 22 ವರ್ಷ 139 ದಿನ. 

ಈ ಮೊದಲು ಸಂಜು ಸ್ಯಾಮ್ಸನ್‌ ತಮಗೆ 22 ವರ್ಷ 157 ದಿನಗಳಾಗಿದ್ದಾಗ ಐಪಿಎಲ್‌ನಲ್ಲಿ 100 ಪಂದ್ಯಗಳ ಮೈಲುಗಲ್ಲು ಸಾಧಿಸಿದ್ದರು.