ರಣಜಿ ಪಂದ್ಯಾವಳಿಯಲ್ಲಿ ಪಂಜಾಬ್‌ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕರ್ನಾಟಕ, ಬಳಿಕ 2 ಪಂದ್ಯಗಳಲ್ಲಿ ತಲಾ 1 ಡ್ರಾ, ಸೋಲು ಕಂಡಿದ್ದು, 2ನೇ ಜಯದ ಕಾತರದಲ್ಲಿದೆ.

ಅಗರ್ತಲಾ: ಕಳೆದೆರಡು ಪಂದ್ಯಗಳಲ್ಲಿ ಗೆಲುವಿನಿಂದ ವಂಚಿತವಾಗಿರುವ 8 ಬಾರಿ ಚಾಂಪಿಯನ್ ಕರ್ನಾಟಕ, ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಶುಕ್ರವಾರದಿಂದ ತ್ರಿಪುರಾ ವಿರುದ್ಧ ಕಣಕ್ಕಿಳಿಯಲಿದೆ. ಮಯಾಂಕ್‌ ಅಗರ್‌ವಾಲ್‌ ನಾಯಕತ್ವದ ರಾಜ್ಯ ತಂಡ ಟೂರ್ನಿಯಲ್ಲಿ 2ನೇ ಗೆಲುವಿನ ಕಾತರದಲ್ಲಿದೆ.ಪಂಜಾಬ್‌ ವಿರುದ್ಧದ ಗೆಲುವಿನೊಂದಿಗೆ ಟೂರ್ನಿಗೆ ಕಾಲಿರಿಸಿದ್ದ ಕರ್ನಾಟಕ, ಬಳಿಕ 2 ಪಂದ್ಯಗಳಲ್ಲಿ ತಲಾ 1 ಡ್ರಾ, ಸೋಲು ಕಂಡಿದೆ. ಗುಜರಾತ್‌ ವಿರುದ್ಧ ಗೆಲ್ಲುವ ಪಂದ್ಯವನ್ನು ಕಳೆದುಕೊಂಡ ತಂಡ, ಗೋವಾ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಎಲೈಟ್‌ ‘ಸಿ’ ಗುಂಪಿನಲ್ಲಿ ಕರ್ನಾಟಕ 9 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ದೇವದತ್‌ ಪಡಿಕ್ಕಲ್ ಭಾರತ ‘ಎ’ ತಂಡ ಸೇರಿರುವ ಕಾರಣ ತ್ರಿಪುರಾ ವಿರುದ್ಧ ಪಂದ್ಯಕ್ಕೆ ಲಭ್ಯರಿಲ್ಲ. ಮನೀಶ್‌ ಪಾಂಡೆ ಕೂಡಾ ಗಾಯದಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಮಯಾಂಕ್‌, ಸಮರ್ಥ್‌, ನಿಕಿನ್‌ ಜೋಶ್‌, ಶರತ್‌ ಶ್ರೀನಿವಾಸ್‌ ಮೇಲೆ ಹೆಚ್ಚಿನ ನಿರೀಕ್ಷೆಯಿದೆ.ಅತ್ತ ತ್ರಿಪುರಾ ಕೂಡಾ ಆಡಿರುವ 3 ಪಂದ್ಯಗಳಲ್ಲಿ ಕೇವಲ 1 ಜಯಗಳಿಸಿದ್ದು, 8 ಅಂಕಗಳೊಂದಿಗೆ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.ಪಂದ್ಯ: ಬೆಳಗ್ಗೆ 8.45ಕ್ಕೆ