ಸಾರಾಂಶ
ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಕರ್ನಾಟಕ ಸಾಧಾರಣ ಪ್ರದರ್ಶನ ತೋರಿದೆ. ಕೆಲ ಆಟಗಾರರ ಹೋರಾಟದಿಂದಾಗಿ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 241 ರನ್ ಕಲೆಹಾಕಿದೆ.
ಅಗರ್ತಲಾ: ನಾಕೌಟ್ ದೃಷ್ಟಿಯಲ್ಲಿ ಮಹತ್ವದ್ದೆನಿಸಿರುವ ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಕರ್ನಾಟಕ ಸಾಧಾರಣ ಪ್ರದರ್ಶನ ತೋರಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ರಾಜ್ಯ ತಂಡ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದು, ಕೆಲ ಆಟಗಾರರ ಹೋರಾಟದಿಂದಾಗಿ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 241 ರನ್ ಕಲೆಹಾಕಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಕರ್ನಾಟಕ ಆರಂಭದಲ್ಲೇ ಆಘಾತಕ್ಕೊಳಗಾಯಿತು. ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದ ಆರ್.ಸಮರ್ಥ್ 1 ರನ್‌ಗೆ ನಿರ್ಗಮಿಸಿದರೆ, ಅನೀಶ್ ಕೆ.ವಿ.(01), ನಿಕಿನ್ ಜೋಸ್(04) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು. ಆದರೆ 4ನೇ ವಿಕೆಟ್‌ಗೆ ನಾಯಕ ಮಯಾಂಕ್ ಅಗರ್‌ವಾಲ್ ಹಾಗೂ ಕಿಶನ್ ಬೆದರೆ 87 ರನ್ ಜೊತೆಯಾಟವಾಡಿ ತಂಡವನ್ನು ಆಧರಿಸಿದರು. ಮಯಾಂಕ್ 51ಕ್ಕೆ ವಿಕೆಟ್ ಒಪ್ಪಿಸಿದರೆ, ಚೊಚ್ಚಲ ಪಂದ್ಯದಲ್ಲಿ ಕಿಶನ್ ಕೊಡುಗೆ 62 ರನ್. ಆ ಬಳಿಕ ತ್ರಿಪುರಾ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ ನಿಂತಿದ್ದು ವೇಗಿ ವೈಶಾಕ್. ಅಬ್ಬರದ ಆಟವಾಡಿದ ವೈಶಾಕ್ 61 ಎಸೆತಗಳಲ್ಲಿ ಔಟಾಗದೆ 50 ರನ್ ಗಳಿಸಿ, 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಶರತ್ 25, ಶರತ್ ಕುಮಾರ್ 19 ರನ್ ಕೊಡುಗೆ ನೀಡಿದರು.ಸ್ಕೋರ್: ಕರ್ನಾಟಕ 241/8(ಮೊದಲ ದಿನದಂತ್ಯಕ್ಕೆ)(ಕಿಶನ್ 62, ಮಯಾಂಕ್ 51, ವೈಶಾಕ್ 50*, ರಾಣಾ ದತ್ತ 3-32)-
ನಾಲ್ವರ ಪಾದಾರ್ಪಣೆತ್ರಿಪುರಾ ವಿರುದ್ಧದ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ನಾಲ್ವರು ಪಾದಾರ್ಪಣೆ ಮಾಡಿದರು. ಕೆ.ವಿ.ಅನೀಶ್, ಕಿಶನ್ ಬೆದರೆ, ಶಶಿ ಕುಮಾರ್, ಹಾರ್ದಿಕ್ ರಾಜ್ ಚೊಚ್ಚಲ ರಣಜಿ ಪಂದ್ಯಗಳನ್ನಾಡಿದರು.