ರಣಜಿ ಟ್ರೋಫಿ: ರೈಲ್ವೇಸ್ ವಿರುದ್ಧ ಹಳಿತಪ್ಪಿದ ಕರ್ನಾಟಕ

| Published : Feb 03 2024, 01:54 AM IST

ಸಾರಾಂಶ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ರಾಜ್ಯದ ಮಾರಕ ಬೌಲಿಂಗ್‌ನಿಂದ ಮೊದಲ ದಿನವೇ ರೈಲ್ವೇಸ್‌ 155ಕ್ಕೆ ಆಲೌಟ್‌ ಆಗಿದೆ. ಆದರೆ ರಾಜ್ಯ ತೀವ್ರ ಬ್ಯಾಟಿಂಗ್‌ ವೈಫಲ್ಯ ಕಂಡಿದ್ದು, ದಿನದಂತ್ಯಕ್ಕೆ 90 ರನ್‌ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಭೀತಿಯಲ್ಲಿದೆ.

ಸೂರತ್‌: ಬೌಲಿಂಗ್‌ನಲ್ಲಿ ಮತ್ತೆ ಅಭೂತಪೂರ್ವ ದಾಳಿ ನಡೆಸಿದರೂ ಬ್ಯಾಟಿಂಗ್‌ನಲ್ಲಿ ಕರ್ನಾಟಕದ ಕಳಪೆ ಪ್ರದರ್ಶನ ಮುಂದುವರಿಸಿದೆ. ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಶುಕ್ರವಾರ ರೈಲ್ವೇಸನ್ನು ರಾಜ್ಯದ ಬೌಲರ್‌ಗಳು 155ಕ್ಕೆ ನಿಯಂತ್ರಿಸಿದ್ದಾರೆ. ಬಳಿಕ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾದ ರಾಜ್ಯ ತಂಡ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ ಕಳೆದುಕೊಂಡು ಕೇವಲ 90 ರನ್‌ ಕಲೆಹಾಕಿದ್ದು, ಇನ್ನೂ 65 ರನ್‌ ಹಿನ್ನಡೆಯಲ್ಲಿದೆ. ತಂಡ ಇನ್ನಿಂಗ್ಸ್‌ ಹಿನ್ನಡೆ ಭೀತಿಯಲ್ಲಿದೆ.ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರೈಲ್ವೇಸ್‌ಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕೇವಲ 7 ರನ್‌ಗೆ ಮೂವರು ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಕಳೆದುಕೊಂಡಿತು. ಆದರೆ 4ನೇ ವಿಕೆಟ್‌ಗೆ ಜೊತೆಯಾದ ನಾಯಕ ಪ್ರಥಮ್‌ ಸಿಂಗ್‌(56) ಹಾಗೂ ಮೊಹಮದ್‌ ಸೈಫ್‌(45) 98 ರನ್‌ ಸೇರಿಸಿ ತಂಡವನ್ನು ಮೇಲಕ್ಕೆತ್ತಿದರು. ಆದರೆ ಪ್ರಥಮ್‌ ಔಟಾದ ಬಳಿಕ ಮತ್ತೆ ಕುಸಿತಕ್ಕೊಳಗಾದ ರೈಲ್ವೇಸ್‌, ಬಳಿಕ ಚೇತರಿಕೆ ಕಾಣಲಿಲ್ಲ. ಸ್ಪಿನ್ನರ್‌ ಹಾರ್ದಿಕ್‌ ರಾಜ್‌, ಕೌಶಿಕ್‌ ತಲಾ 3, ವಿದ್ವತ್‌, ವೈಶಾಕ್‌ ತಲಾ 2 ವಿಕೆಟ್‌ ಕಬಳಿಸಿದರು.ರಾಜ್ಯಕ್ಕೂ ಆಘಾತ:

ರೈಲ್ವೇಸ್‌ ಕುಸಿತದ ಬಳಿಕ ರಾಜ್ಯ ತಂಡವೂ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ಮಯಾಂಕ್‌, ದೇವದತ್‌ ಪಡಿಕ್ಕಲ್‌ ಗೈರಿನಲ್ಲಿ ತಂಡಕ್ಕೆ ನೆರವಾಗುವ ನಿರೀಕ್ಷೆಯಲ್ಲಿದ್ದ ಸಮರ್ಥ್‌(22), ನಿಶ್ಚಲ್‌(20), ಅನೀಶ್‌(27) ಹಾಗೂ ನಾಯಕ ನಿಕಿನ್‌ ಜೋಸ್‌(00), ಮನೀಶ್ ಪಾಂಡೆ(18) ಬೇಗನೇ ನಿರ್ಗಮಿಸಿದರು. ಕಿಶನ್‌ ಬೆದರೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದು, ಇನ್ನಿಂಗ್ಸ್‌ ಮುನ್ನಡೆ ತಂದುಕೊಡಲು ಹೋರಾಡುತ್ತಿದ್ದಾರೆ.ಸ್ಕೋರ್: ರೈಲ್ವೇಸ್‌ 155/10(ಪ್ರಥಮ್‌ 56, ಸೈಫ್‌ 45, ಕೌಶಿಕ್‌ 3-22, ಹಾರ್ದಿಕ್‌ 3-28), ಕರ್ನಾಟಕ 90/6(ಮೊದಲ ದಿನದಂತ್ಯಕ್ಕೆ) (ಅನೀಶ್‌ 27, ಆಕಾಶ್ 3-21)-55ನೇ ನಾಯಕಕರ್ನಾಟಕ ತಂಡವನ್ನು ರಣಜಿ ಟ್ರೋಫಿಯಲ್ಲಿ ಮುನ್ನಡೆಸಿದ 55ನೇ ಆಟಗಾರ ನಿಕಿನ್‌ ಜೋಸ್‌.