ಸಾರಾಂಶ
ಚೆನ್ನೈ: ದೇಸಿ ಕ್ರಿಕೆಟ್‌ನಲ್ಲಿ ತನ್ನ ಪ್ರಮುಖ ಎದುರಾಳಿಯಾಗಿರುವ ತಮಿಳುನಾಡು ವಿರುದ್ಧ ಕರ್ನಾಟಕ ತಂಡ ಶುಕ್ರವಾರದಿಂದ ರಣಜಿ ಟ್ರೋಫಿ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
ಕ್ವಾರ್ಟರ್ ಫೈನಲ್ ದೃಷ್ಟಿಯಲ್ಲಿ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದ್ದಾಗಿದ್ದು, ಪಂದ್ಯಕ್ಕೆ ಚೆನ್ನೈನ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಎಲೈಟ್ ‘ಸಿ’ ಗುಂಪಿನಲ್ಲಿರುವ ಇತ್ತಂಡಗಳು ಈ ಬಾರಿ ಉತ್ತಮ ಸಾಧಾರಣ ಪ್ರದರ್ಶನ ತೋರಿದ್ದು, ತಲಾ 21 ಅಂಕಗಳನ್ನು ಸಂಪಾದಿಸಿವೆ. ಆದರೆ ನೆಟ್ ರನ್‌ರೇಟ್ ಆಧಾರದಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದರೆ,
ಕರ್ನಾಟಕ 2ನೇ ಸ್ಥಾನ ಕಾಯ್ದುಕೊಂಡಿದೆ. ಆಡಿರುವ 5 ಪಂದ್ಯಗಳಲ್ಲಿ ಇತ್ತಂಡಗಳು ತಲಾ 3ರಲ್ಲಿ ಜಯಗಳಿಸಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಗ್ರಸ್ಥಾನದ ಕ್ವಾರ್ಟರ್ ಫೈನಲ್ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಳ್ಳಲಿದೆ.
ಪಡಿಕ್ಕಲ್ ಬಲ: ಭಾರತ ‘ಎ’ ತಂಡ ಸೇರಿದ್ದ ಕಾರಣ ಕಳೆದೆರಡು ರಣಜಿ ಪಂದ್ಯಗಳಿಗೆ ಅಲಭ್ಯರಾಗಿದ್ದ ದೇವದತ್ ಪಡಿಕ್ಕಲ್ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಬಲ ಒದಗಿಸಲಿದೆ.
ಅವರು 4 ಇನ್ನಿಂಗ್ಸ್‌ಗಳಲ್ಲಿ 2ಶತಕ ಸೇರಿ 369 ರನ್ ಕಲೆ ಹಾಕಿದ್ದಾರೆ. ಅನುಭವಿಗಳಾದ ಮನೀಶ್ ಪಾಂಡೆ, ಆರ್.ಸಮರ್ಥ್ ಕೂಡಾ ನಿರೀಕ್ಷೆಗೆ ತಕ್ಕಂತೆ ಆಡಬೇಕಿದೆ.ಇನ್ನು ರಾಜ್ಯದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ತ್ರಿವಳಿ ವೇಗಿಗಳ ಪ್ರದರ್ಶನದ ಮೇಲೆ ತಂಡದ ಗೆಲುವು-ಸೋಲು ನಿರ್ಧಾರವಾಗಲಿದೆ.
ಕೇವಲ 6 ಇನ್ನಿಂಗ್ಸ್‌ಗಳಲ್ಲಿ 679 ರನ್ ಕಲೆಹಾಕಿರುವ ಎನ್.ಜಗದೀಶನ್ ತಮಿಳುನಾಡಿನ ಬ್ಯಾಟಿಂಗ್ ಆಧಾರಸ್ತಂಭ ಎನಿಸಿಕೊಂಡಿದ್ದು, ಅವರನ್ನು ಕಟ್ಟಿಹಾಕುವ ಹೊಣೆಗಾರಿಕೆ ರಾಜ್ಯದ ಬೌಲರ್‌ಗಳ ಮೇಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಮಯಾಂಕ್ ಕಣಕ್ಕೆ: ತ್ರಿಪುರಾ ವಿರುದ್ಧದ ಪಂದ್ಯದ ಬಳಿಕ ವಿಮಾನದಲ್ಲಿ ದ್ರವ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಮಯಾಂಕ್ ಅಗರ್‌ವಾಲ್ ಗುಣಮುಖರಾಗಿ ತಂಡಕ್ಕೆ ಮರಳಿದ್ದಾರೆ. ಅವರು ಈ ಪಂದ್ಯದಲ್ಲಿ ನಾಯಕತ್ವ ವಹಿಸಲಿದ್ದು, ಬ್ಯಾಟಿಂಗ್‌ನಲ್ಲೂ ತಂಡದ ಅಧಾರಸ್ತಂಭ ಎನಿಸಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಮಯಾಂಕ್ ಬದಲು ಯುವ ಆಟಗಾರ ನಿಕಿನ್ ಜೋಸ್ ತಂಡ ಮುನ್ನಡೆಸಿದ್ದರು.---
ತಲಾ 18 ಜಯಉಭಯ ತಂಡಗಳು ರಣಜಿಯಲ್ಲಿ ಈ ವರೆಗೂ 73 ಬಾರಿ ಮುಖಾಮುಖಿಯಾಗಿವೆ. ಎರಡೂ ತಂಡಗಳು ತಲಾ 18ರಲ್ಲಿ ಜಯಗಳಿಸಿದ್ದು, 37 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.