ಸಾರಾಂಶ
ವೇಗಿ ವಾಸುಕಿ ಕೌಶಿಕ್ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 89 ರನ್‌ಗೆ ಆಲೌಟ್. ಕೌಶಿಕ್‌ಗೆ 5 ವಿಕೆಟ್. ಕುಸಿದ ಕರ್ನಾಟಕಕ್ಕೆ ಕೆ.ಎಲ್.ಶ್ರೀಜಿತ್ ಅರ್ಧಶತಕದ ಆಸರೆ. ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 127 ರನ್. 38 ರನ್ ಮುನ್ನಡೆ.
ಲಖನೌ: ಸತತ 2ನೇ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ ವೇಗಿ ವಾಸುಕಿ ಕೌಶಿಕ್, ಉತ್ತರ ಪ್ರದೇಶ ವಿರುದ್ಧದ ‘ಸಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನವೇ ಮೇಲುಗೈ ಸಾಧಿಸಲು ನೆರವಾದರು. ಕೌಶಿಕ್‌ರ ವೇಗದ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ಮೊದಲ ಇನ್ನಿಂಗ್ಸಲ್ಲಿ ಕೇವಲ 89 ರನ್‌ಗೆ ಆಲೌಟ್ ಆಯಿತು.
ಎಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೌಶಿಕ್ 16 ಓವರಲ್ಲಿ 8 ಮೇಡನ್ ಹಾಕಿ ಕೇವಲ 20 ರನ್‌ಗೆ 5 ವಿಕೆಟ್ ಕಬಳಿಸಿದರು. ಕಳೆದ ಪಂದ್ಯದಲ್ಲಿ ಬಂಗಾಳ ವಿರುದ್ಧ ಕೌಶಿಕ್ 38ಕ್ಕೆ 5 ವಿಕೆಟ್ ಉರುಳಿಸಿದ್ದರು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಉತ್ತರ ಪ್ರದೇಶ 5 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ನಾಯಕ ಆರ್ಯನ್ ಜುಯಲ್ ಸೊನ್ನೆಗೆ ಔಟಾದರು. 37 ರನ್ ಆಗುವಷ್ಟರಲ್ಲಿ ಮತ್ತೆ 3 ವಿಕೆಟ್‌ಗಳು ಪತನಗೊಂಡವು. ಸಮೀರ್ ರಿಜ್ವಿ 25, ಕೃತಗ್ಯ ಸಿಂಗ್ 13, ಸೌರಭ್ ಕುಮಾರ್ 13 ರನ್ ಗಳಿಸಿದರು. ಯುವ ವೇಗಿಗಳಾದ ವಿದ್ಯಾಧರ್ ಪಾಟೀಲ್ (2/22) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಯಶೋವರ್ಧನ್ (1/19) ಸಹ ಉತ್ತಮ ಪ್ರದರ್ಶನ ತೋರಿದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೂ ಆರಂಭಿಕ ಆಘಾತ ಎದುರಾಯಿತು. ನಿಕಿನ್ ಜೋಸ್ ಹಾಗೂ ಆರ್.ಸ್ಮರಣ್ ಇಬ್ಬರೂ ಖಾತೆ ತೆರೆಯುವ ಮೊದಲೇ ಔಟಾದರು. ನಾಯಕ ಮಯಾಂಕ್ ಅಗರ್‌ವಾಲ್ (30) ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಕೃಷ್ಣನ್ ಶ್ರೀಜಿತ್ ನಡುವಿನ 48 ರನ್ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಮನೀಶ್ ಪಾಂಡೆ ಹಾಗೂ ಅಭಿನವ್ ಮನೋಹರ್ ಇಬ್ಬರೂ ತಲಾ 6 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಬಿರುಸಿನ ಬ್ಯಾಟಿಂಗ್ ನಡೆಸಿದ ಶ್ರೀಜಿತ್ 77 ಎಸೆತದಲ್ಲಿ 68 ರನ್ ಗಳಿಸಿ ಔಟಾಗದೆ ಉಳಿದರು. ಶ್ರೇಯಸ್ ಗೋಪಾಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮೊದಲ ದಿನದಂತ್ಯಕ್ಕೆ ಕರ್ನಾಟಕ 5 ವಿಕೆಟ್‌ಗೆ 127 ರನ್ ಗಳಿಸಿ, 38 ರನ್ ಮುನ್ನಡೆ ಪಡೆದಿದೆ.ಸ್ಕೋರ್: ಉ.ಪ್ರದೇಶ 40.3 ಓವರಲ್ಲಿ 89/10 (ಸಮೀರ್ 25 , ಕೌಶಿಕ್ 5-20), ಕರ್ನಾಟಕ (1ನೇ ದಿನದಂತ್ಯಕ್ಕೆ) 127/5 (ಶ್ರೀಜಿತ್ 68*, ಮಯಾಂಕ್ 30, ಅಕಿಬ್ 2-31)