ಇಲಿ ಬಿದ್ದ ಊಟ ಸೇವನೆ: 20 ವಿದ್ಯಾರ್ಥಿಗಳು ಅಸ್ವಸ್ಥ

| Published : Jun 07 2024, 01:31 AM IST / Updated: Jun 07 2024, 04:19 AM IST

rat demo pic

ಸಾರಾಂಶ

ಸಾಂಬಾರ್‌ನಲ್ಲಿ ಇಲಿ ಬಿದ್ದು ಊಟ ಸೇವಿಸಿದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿ ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿವಿಯಲ್ಲಿ ನಡೆದಿದೆ.

 ಆನೇಕಲ್‌ :  ಸಾಂಬಾರ್‌ನಲ್ಲಿ ಇಲಿ ಬಿದ್ದು ಊಟ ಸೇವಿಸಿದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿ ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿವಿಯಲ್ಲಿ ನಡೆದಿದೆ. 

ಬುಧವಾರ ಸಂಜೆ ಪಾಠ ಪ್ರವಚನ ಮುಗಿಸಿದ ವಿದ್ಯಾರ್ಥಿಗಳು ಎಂದಿನಂತೆ ರಾತ್ರಿ ಊಟಕ್ಕೆ ಹಾಜರಾಗಿ ಚಪಾತಿ, ಪಲ್ಯ ಸೇವಿಸಿದ ನಂತರ ಅನ್ನ ಸಾಂಬಾರ್ ಬಡಿಸಿಕೊಂಡು ಊಟ ಮಾಡುತ್ತಿದ್ದರು. 

ಆಗ ಒಬ್ಬ ವಿದ್ಯಾರ್ಥಿ ತರಕಾರಿ ಹೋಳು ಬಡಿಸಿ ಕೊಂಡಾಗ ಜೀವಂತ ಇಲಿ ಸಾಂಬಾರ್‌ನಲ್ಲಿ ಕಂಡುಬಂದಿದೆ ಆಗ ಸಹಪಾಠಿಗಳಿಗೆ ಊಟ ಮಾಡದಂತೆ ಹೇಳಿದ್ದಾನೆ. ಅಷ್ಟರಲ್ಲಿ ಕೆಲ ವಿದ್ಯಾರ್ಥಿಗಳು ಸಾಂಬಾರ್ ಸೇವಿಸಿದ್ದರಿಂದ ವಾಕರಿಕೆ ಬಂದಂತಾಗಿ ವಾಂತಿ ಮಾಡಲಾರಂಭಿಸಿದ್ದಾರೆ.

ವಿಷಯ ತಿಳಿದ ವಾರ್ಡನ್, ಫುಡ್ ಸೂಪರ್ವೈಸರ್ ಸ್ಥಳಕ್ಕೆ ಧಾವಿಸಿ ಬಂದು ಸಾಂಬಾರ್ ಇದ್ದ ಪಾತ್ರೆಯನ್ನು ತೆರವುಗೊಳಿಸಿದ್ದಾರೆ. ನಂತರ ಅಸ್ವಸ್ಥರಿಗೆ ಧೈರ್ಯ ಹೇಳಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ಹರಡುತ್ತಿದ್ದಂತೆ ಇತರೆ ವಿದ್ಯಾರ್ಥಿಗಳು ಊಟ ಮಾಡಬಾರದೆಂದೂ ತಿಳಿಸಿ, ರಿಜಿಸ್ಟ್ರಾರ್ ಸಾಯಿರಾಮ್ ಹಾಗೂ ವಿಸಿ ಮಂಜುನಾಥ್ ಅಡುಗೆ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಅಲಲ್ಲದೆ, ಕಾರಣ ಪತ್ತೆಹಚ್ಚಿ ನಿರ್ಲಕ್ಷ್ಯದ ಕಾರಣಕ್ಕೆ ಇಬ್ಬರು ಅಡುಗೆ ಸಿಬ್ಬಂದಿ ಮೇಲೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಪ್ರತಿಭಟನೆ: ಗುರುವಾರ ಬೆಳಗ್ಗೆ ಕ್ಯಾಂಪಸ್ ನಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕೆಂದು ಹಲವು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ರಿಜಿಸ್ಟ್ರಾರ್ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆದು ಇನ್ನು ಮುಂದೆ ಇಂತಹ ಪ್ರಸಂಗ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.