ಸಾರಾಂಶ
ಕಾನ್ಪುರ: ಜಡೇಜಾ ಸೋಮವಾರ ಟೆಸ್ಟ್‌ನಲ್ಲಿ 300 ವಿಕೆಟ್ ಪೂರ್ಣಗೊಳಿಸಿದರು. ಈ ಮೂಲಕ 300+ ವಿಕೆಟ್ ಹಾಗೂ 3000+ ರನ್ ಗಳಿಸಿದ ಭಾರತದ 3ನೇ ಹಾಗೂ ವಿಶ್ವದ 11ನೇ ಆಟಗಾರ ಎನಿಸಿಕೊಂಡರು. ವೇಗವಾಗಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಜಡೇಜಾ(74 ಪಂದ್ಯ) 2ನೇ ಸ್ಥಾನಕ್ಕೇರಿದರು.
ಇಂಗ್ಲೆಂಡ್‌ನ ಇಯಾನ್ ಬೋಥಂ 72 ಪಂದ್ಯಗಳಲ್ಲಿ ಈ ಮೈಲುಗಲ್ಲು ತಲುಪಿದ್ದರು. ಉಳಿದಂತೆ ಭಾರತದ ಅಶ್ವಿನ್, ಕಪಿಲ್ ದೇವ್, ನ್ಯೂಜಿಲೆಂಡ್‌ನ ರಿಚರ್ಡ್ ಹಾಡ್ಲೀ, ವೆಟೋರಿ, ಆಸ್ಟ್ರೇಲಿಯಾದ ಶೇನ್ ವಾರ್ನ್, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್, ದ.ಆಫ್ರಿಕಾದ ಶಾನ್ ಫೊಲಾಕ್, ಪಾಕಿಸ್ತಾನದ ಇಮ್ರಾನ್ ಖಾನ್, ಶ್ರೀಲಂಕಾದ ಚಾಮಿಂಡಾ ವಾಸ್ ಕೂಡಾ ಈ ಸಾಧನೆ ಮಾಡಿದ್ದಾರೆ.
31 ಎಸೆತ: ಜೈಸ್ವಾಲ್ 31 ಎಸೆತದಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಇದು ಟೆಸ್ಟ್‌ನಲ್ಲಿ ಭಾರತೀಯರ ಜಂಟಿ 3ನೇ ವೇಗದ ಫಿಫ್ಟಿ. ರಿಷಭ್ 28, ಕಪಿಲ್ ದೇವ್ 30, ಶಾರ್ದೂಲ್ ಠಾಕೂರ್ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
ಟೆಸ್ಟ್‌ನಲ್ಲಿ ವೇಗದ 50, 100, 150, 200, 250 ದಾಖಲೆ!
ಭಾರತ ಶುಕ್ರವಾರ ಎಷ್ಟರ ಮಟ್ಟಿಗೆ ಆಕ್ರಮಣಕಾರಿಯಾಗಿ ಆಟವಾಡಿತು ಎಂದರೆ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ವೇಗದ 50, 100, 150, 200 ಹಾಗೂ 250 ರನ್ ಗಳಿಸಿದ ತಂಡ ಎಂಬ ಖ್ಯಾತಿಗೆ ಪಾತ್ರವಾಯಿತು. ಭಾರತ 3ನೇ ಓವರ್‌ನಲ್ಲೇ 50 ರನ್ ಪೂರ್ಣಗೊಳಿಸಿ, ಇಂಗ್ಲೆಂಡ್ ಹೆಸರಲ್ಲಿದ್ದ ದಾಖಲೆ ಮುರಿಯಿತು. ಇತ್ತೀಚೆಗೆ ವಿಂಡೀಸ್ ವಿರುದ್ಧ ಇಂಗ್ಲೆಂಡ್ 4.2 ಓವರ್‌ಗಳಲ್ಲಿ 50 ರನ್ ಗಳಿಸಿತ್ತು. ಬಳಿಕ ಭಾರತ ವೇಗದ 100 ರನ್(10.1 ಓವರ್), ವೇಗದ 150 (18.2 ಓವರ್), ವೇಗದ 200 (24.2 ಓವರ್) ಹಾಗೂ ವೇಗದ 250 (30.1 ಓವರ್) ಗಳಿಸಿ ಹೊಸ ಇತಿಹಾಸ ಸೃಷ್ಟಿಸಿತು.