ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪಾರ ಪ್ರಮಾಣದ ಕನ್ನಡಿಗ ಅಭಿಮಾನಿಗಳನ್ನು ಹೊಂದಿರುವ, ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಕನ್ನಡಕ್ಕೆ ಮನ್ನಣೆ ನೀಡಿದೆ.
ಕೆಲ ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಹಲವು ತಾರೆಯರ ಮೂಲಕ ತಂಡದ ಹೆಸರು ಬದಲಾವಣೆಯ ಸುಳಿವು ನೀಡುತ್ತಿದ್ದ ಫ್ರಾಂಚೈಸಿಯು ಮಂಗಳವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಆರ್‌ಸಿಬಿ ಅನ್‌ಬಾಕ್ಸ್’ ಕಾರ್ಯಕ್ರಮದಲ್ಲಿ ತನ್ನ ಹೆಸರಲ್ಲಿರುವ Bangalore ಅನ್ನು Bengaluru ಎಂದು ಅಧಿಕೃತವಾಗಿ ಬದಲಾಯಿಸಿದೆ.
2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ತಂಡದ ಹೆಸರು ರಾಯಲ್ ಚಾಲೆಂಜರ್ಸ್ Bangalore ಎಂದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಕನ್ನಡಕ್ಕೆ ಮನ್ನಣೆ ನೀಡಲು ಶುರು ಮಾಡಿರುವ ಫ್ರಾಂಚೈಸಿಯು ಸದ್ಯ ತಂಡದ ಹೆಸರನ್ನೂ ಬದಲಾಯಿಸಿದೆ.
ಲೋಗೋ ವಿನ್ಯಾಸದಲ್ಲೂ ಕೂಡಾ ಕೊಂಚ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ಹೆಸರಿನಲ್ಲೇ ಆಡುತ್ತಿರುವ ಫ್ರಾಂಚೈಸಿಯು ಹೆಸರನ್ನೇ ಈಗ ಕನ್ನಡದಲ್ಲಿ ಮರು ನಾಮಕರಣ ಮಾಡಿದ್ದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
ಇನ್ನು, ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಹೊಸ ಜೆರ್ಸಿಯನ್ನೂ ಅನಾವರಣ ಮಾಡಲಾಯಿತು. ನಾರ್ವೆಯ ಸಂಗೀತ ಕಲಾವಿದ ಅಲಾನ್ ವಾಕರ್, ರಘು ದೀಕ್ಷಿತ್ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಿದರು.
ಸಮಾರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಕೆಲ ಗಂಟೆಗಳ ಕಾಲ ನೆಟ್ಸ್ ಅಭ್ಯಾಸ ನಡೆಸಿದರು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿ ಸಂತಸ ಪಟ್ಟರು. ಕಾರ್ಯಕ್ರಮದುದ್ದಕ್ಕೂ ಆರ್‌ಸಿಬಿ...ಆರ್‌ಸಿಬಿ ಘೋಷಣೆ ಮುಗಿಲು ಮುಟ್ಟಿತ್ತು.