ಐಪಿಎಲ್‌ನಲ್ಲಿ 1500 ಸಿಕ್ಸರ್‌:ಆರ್‌ಸಿಬಿ ಹೊಸ ಮೈಲಿಗಲ್ಲು

| Published : Mar 30 2024, 12:54 AM IST

ಸಾರಾಂಶ

ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಐಪಿಎಲ್‌ನಲ್ಲಿ 1500 ಸಿಕ್ಸರ್‌ಗಳನ್ನು ಪೂರೈಸಿತು. 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಬಳಿಕ ಈ ಸಾಧನೆ ಮಾಡಿದ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

3 ಬಾರಿ ರನ್ನರ್‌-ಅಪ್‌ ಆರ್‌ಸಿಬಿ ಐಪಿಎಲ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಟೂರ್ನಿಯ ಇತಿಹಾಸದಲ್ಲೇ 1500 ಸಿಕ್ಸರ್‌ ಸಿಡಿಸಿದ 2ನೇ ತಂಡ ಎಂಬ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಿದೆ.

8ನೇ ಓವರ್‌ನಲ್ಲಿ ನರೈನ್‌ ಎಸೆತವನ್ನು ಕೊಹ್ಲಿ ಬೌಂಡರಿ ಗೆರೆಯಾಚೆಗೆ ದಾಟಿಸಿದರು. ಇದು ಐಪಿಎಲ್‌ನಲ್ಲಿ ತಂಡದ 1500ನೇ ಸಿಕ್ಸರ್‌. ಪಂದ್ಯದಲ್ಲಿ 11 ಸಿಕ್ಸರ್‌ ಗಳಿಸಿದ ತಂಡ ಐಪಿಎಲ್‌ನ ಒಟ್ಟಾರೆ ಸಿಕ್ಸರ್‌ ಗಳಿಕೆಯನ್ನು 1507ಕ್ಕೆ ಹೆಚ್ಚಿಸಿತು.

ಈ ಮೊದಲು 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಾತ್ರ ಈ ಮೈಲಿಗಲ್ಲು ಸಾಧಿಸಿತ್ತು. ಮುಂಬೈ ಬ್ಯಾಟರ್‌ಗಳು ಈ ವರೆಗೆ 1575 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 5 ಬಾರಿ ಚಾಂಪಿಯನ್‌ ಚೆನ್ನೈ ತಂಡ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ತಂಡ 1421 ಸಿಕ್ಸರ್‌ ಬಾರಿಸಿದೆ. 1405 ಸಿಕ್ಸರ್‌ಗಳೊಂದಿಗೆ ಪಂಜಾಬ್‌ 4ನೇ, 1365 ಸಿಕ್ಸರ್‌ಗಳೊಂದಿಗೆ ಕೋಲ್ಕತಾ 5ನೇ ಸ್ಥಾನಗಳಲ್ಲಿವೆ.

ಇನ್ನು, ಐಪಿಎಲ್‌ನಲ್ಲಿ 1500+ ಸಿಕ್ಸರ್‌ ಬಿಟ್ಟುಕೊಟ್ಟ ಮೊದಲ ಮತ್ತು ಏಕೈಕ ತಂಡ ಕುಖ್ಯಾತಿ ಆರ್‌ಸಿಬಿ ಹೆಸರಲ್ಲಿದೆ. ತಂಡದ ಬೌಲರ್‌ಗಳು ಈ ವರೆಗೆ 1516 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ. 1392 ಸಿಕ್ಸರ್‌ಗಳೊಂದಿಗೆ ಡೆಲ್ಲಿ 2ನೇ ಸ್ಥಾನದಲ್ಲಿದೆ. ಮುಂಬೈ 1389, ಪಂಜಾಬ್‌ 1360, ಕೋಲ್ಕತಾ 1341 ಸಿಕ್ಸರ್‌ಗಳನ್ನು ಚಚ್ಚಿಸಿಕೊಂಡಿದೆ.