ಚೆಪಾಕ್‌ನಲ್ಲಿಆರ್‌ಸಿಬಿಗೆ ಈ ಸಲವೂ ನಿರಾಸೆ!

| Published : Mar 23 2024, 01:05 AM IST / Updated: Mar 23 2024, 08:37 AM IST

IPL 2024 CSK-RCB Match 01

ಸಾರಾಂಶ

17ನೇ ಆವೃತ್ತಿ ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸೋಲಿನ ಆರಂಭ. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ ಸೋಲು. ಈ ಸಲವೂ ಚೆನ್ನೈನ ಭದ್ರಕೋಟೆ ಚೆಪಾಕ್‌ ಅನ್ನು ಭೇದಿಸಲು ಆರ್‌ಸಿಬಿ ವಿಫಲ. 2008ರ ನಂತರ ಆರ್‌ಸಿಬಿಗೆ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಸತತ 8ನೇ ಸೋಲು.

ಚೆನ್ನೈ: ಈ ಬಾರಿಯಾದರೂ ಕಪ್‌ ಗೆಲ್ಲುತ್ತೇವೆ ಎಂಬ ನಿರೀಕ್ಷೆ, ವಿಶ್ವಾಸದೊಂದಿಗೆ 17ನೇ ಆವೃತ್ತಿ ಐಪಿಎಲ್‌ಗೆ ಕಾಲಿಟ್ಟ ಆರ್‌ಸಿಬಿಗೆ ಮೊದಲ ಪಂದ್ಯದಲ್ಲೇ ಆಘಾತಕಾರಿ ಸೋಲು ಎದುರಾಗಿದೆ. 

ಚೆನ್ನೈ ತಾನೇಕೆ ಚಾಂಪಿಯನ್‌ ಎಂಬುದನ್ನು ಮೊದಲ ಪಂದ್ಯದಲ್ಲೇ ತೋರಿಸಿಕೊಟ್ಟಿದ್ದು, ಆರ್‌ಸಿಬಿ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದೆ.

2008ರಿಂದಲೂ ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ ವಿರುದ್ಧ ಗೆದ್ದೇ ಇಲ್ಲದ ಆರ್‌ಸಿಬಿ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಆಯ್ಕೆ ಮಾಡಿದ್ದು ಬ್ಯಾಟಿಂಗ್. ಮುಸ್ತಾಫಿಜುರ್‌ ರಹ್ಮಾನ್‌ ದಾಳಿಗೆ ತತ್ತರಿಸಿದರೂ ಬಳಿಕ ಅಬ್ಬರಿಸಿದ ಆರ್‌ಸಿಬಿ 6 ವಿಕೆಟ್‌ಗೆ 173 ರನ್‌ ಕಲೆಹಾಕಿತು. 

ದೊಡ್ಡ ಮೊತ್ತವಾದರೂ ಚೆನ್ನೈಗಿದು ಸವಾಲಾಗಲಿಲ್ಲ. ಸಂಘಟಿತ ಬ್ಯಾಟಿಂಗ್ ಪ್ರದರ್ಶಿಸಿದ ತಂಡ 18.4 ಓವರಲ್ಲಿ ಗೆಲುವನ್ನು ತನ್ನತ್ತ ಒಲಿಸಿಕೊಂಡಿತು. 

ಆರಂಭದಲ್ಲೇ ಅಬ್ಬರಿಸಿದ ರಚಿನ್‌ ರವೀಂದ್ರ 15 ಎಸೆತಗಳಲ್ಲಿ 37 ರನ್‌ ಚಚ್ಚಿದರು. ಋತುರಾಜ್‌ ಗಾಯಕ್ವಾಡ್‌ 15, ಅಜಿಂಕ್ಯಾ ರಹಾನೆ 27, ಡ್ಯಾರಿಲ್‌ ಮಿಚೆಲ್‌ 22 ರನ್‌ ಕೊಡುಗೆ ನೀಡಿದರು. ಶಿವಂ ದುಬೆ(ಔಟಾಗದೆ 34) ಹಾಗೂ ರವೀಂದ್ರ ಜಡೇಜಾ(ಔಟಾಗದೆ 25) ತಂಡವನ್ನು ಗೆಲುವಿನ ದಡ ಸೇರಿಸಿದರು.

ಅನುರ್‌-ಕಾರ್ತಿಕ್‌ ಆರ್ಭಟ: ನಾಯಕ ಡು ಪ್ಲೆಸಿ ಆರಂಭದಲ್ಲೇ ಅಬ್ಬರಿಸಿ 23 ಎಸೆತಗಳಲ್ಲಿ 35 ರನ್ ಕಲೆಹಾಕಿದರು. ಆದರೆ 5ನೇ ಓವರಲ್ಲಿ ಮುಷ್ತಾಫಿಜುರ್‌ ರಹ್ಮಾನ್‌ ಅವರು ಡು ಪ್ಲೆಸಿ ಜೊತೆಗೆ ರಜತ್‌ ಪಾಟೀರಾರ್‌(00)ರನ್ನು ಪೆವಿಲಿಯನ್‌ಗೆ ಅಟ್ಟಿದರು. 

ಮ್ಯಾಕ್ಸ್‌ವೆಲ್‌ ಕೂಡಾ ಖಾತೆ ತೆರೆಯದೆ ನಿರ್ಗಮಿಸಿದರು. ಕೊಹ್ಲಿ(21) ಹಾಗೂ ಗ್ರೀನ್‌(18) ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರೂ 12ನೇ ಓವರಲ್ಲಿ ಇವರಿಬ್ಬರನ್ನೂ ರಹ್ಮಾನ್‌ ಔಟ್‌ ಮಾಡಿದರು. 

14 ಓವರಲ್ಲಿ 90ಕ್ಕೆ 5 ವಿಕೆಟ್‌ ಕಳೆದುಕೊಂಡಿದ್ದ ಆರ್‌ಸಿಬಿಗೆ ನೆರವಾಗಿದ್ದ ಅನುಜ್‌ ರಾವತ್‌(25 ಎಸೆತದಲ್ಲಿ 48) ಹಾಗೂ ದಿನೇಶ್‌ ಕಾರ್ತಿಕ್‌(ಔಟಾಗದೆ 38). 

ಚೆನ್ನೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈ ಜೋಡಿ 6ನೇ ವಿಕೆಟ್‌ಗೆ 50 ಎಸೆತದಲ್ಲಿ 97 ರನ್‌ ಸೇರಿಸಿತು. ರಹ್ಮಾನ್‌ 4 ವಿಕೆಟ್‌ ಕಿತ್ತರು.

ಸ್ಕೋರ್‌: ಆರ್‌ಸಿಬಿ 20 ಓವರಲ್ಲಿ 173/6 (ಅನುಜ್‌ 48, ಕಾರ್ತಿಕ್‌ 38*, ಡು ಪ್ಲೆಸಿ 35, ಮುಸ್ತಾಫಿಜುರ್‌ 4-29), ಚೆನ್ನೈ 18.4 ಓವರಲ್ಲಿ 176/4 (ದುಬೆ 34*, ರಚಿನ್‌ 37, ಗ್ರೀನ್‌ 2-27)