ಚಿನ್ನಸ್ವಾಮಿಯಲ್ಲಿ ಕೊಹ್ಲಿ 3000 ರನ್‌: ದಾಖಲೆ!

| Published : May 19 2024, 01:51 AM IST / Updated: May 19 2024, 04:19 AM IST

ಸಾರಾಂಶ

ಚೆನ್ನೈ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ದಾಖಲೆಗಳ ಸುರಿಮಳೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್‌, 2ನೇ ಬಾರಿಗೆ ಆವೃತ್ತಿಯೊಂದರಲ್ಲಿ 700ಕ್ಕೂ ಹೆಚ್ಚು ರನ್‌ ಮೈಲುಗಲ್ಲು. ಈ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ.

 ಬೆಂಗಳೂರು : ರನ್‌ ಮೆಷಿನ್‌ ವಿರಾಟ್‌ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ವಿಶೇಷ ದಾಖಲೆ ಬರೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3000 ರನ್‌ ಪೂರ್ತಿಗೊಳಿಸಿದ ವಿರಾಟ್‌, ಈ ಸಾಧನೆ ಮಾಡಿದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶನಿವಾರ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಹೈವೋಲ್ಟೇಜ್‌ ಪಂದ್ಯದಲ್ಲಿ 13 ರನ್‌ ಗಳಿಸಿದಾಗ ಕೊಹ್ಲಿ ಈ ಮೈಲಿಗಲ್ಲು ತಲುಪಿದರು. 2008ರಲ್ಲಿ ಏಪ್ರಿಲ್‌ 18ರಂದು ಕೋಲ್ಕತಾ ನೈಟ್‌ರೈಡರ್ಸ್‌ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಐಪಿಎಲ್‌ ಪಂದ್ಯ ಆಡಿದ್ದ ಕೊಹ್ಲಿ, ಕೇವಲ 1 ರನ್‌ ಗಳಿಸಿದ್ದರು. ಅವರು ಈ ವರೆಗೆ ಚಿನ್ನಸ್ವಾಮಿಯಲ್ಲಿ 87 ಇನ್ನಿಂಗ್ಸ್‌ ಆಡಿದ್ದು, 22 ಅರ್ಧಶತಕ, 4 ಶತಕ ಸಿಡಿಸಿದ್ದಾರೆ.

ಇನ್ನು, ರೋಹಿತ್‌ ಶರ್ಮಾ ಮಾತ್ರ ಐಪಿಎಲ್‌ನಲ್ಲಿ ಒಂದೇ ಕ್ರೀಡಾಂಗಣದಲ್ಲಿ 2000+ ರನ್‌ ಗಳಿಸಿದ್ದಾರೆ. ಅವರು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 2295 ರನ್‌ ಕಲೆಹಾಕಿದ್ದಾರೆ. ಕ್ರೀಡಾಂಗಣವೊಂದರಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿ ವಿಲಿಯರ್ಸ್‌ 3ನೇ ಸ್ಥಾನದಲ್ಲಿದ್ದಾರೆ. ಎಬಿಡಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 1960 ರನ್‌ ಗಳಿಸಿದ್ದಾರೆ. ಇದೇ ವೇಳೆ, ಕೊಹ್ಲಿ ಒಟ್ಟಾರೆ ಐಪಿಎಲ್‌ನಲ್ಲಿ 251 ಪಂದ್ಯಗಳಲ್ಲಿ 7971 ರನ್‌ ಕಲೆಹಾಕಿದ್ದಾರೆ.

ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್‌ ಒಟ್ಟಾರೆಯಾಗಿ 103 ಟಿ20 ಪಂದ್ಯಗಳನ್ನಾಡಿದ್ದು, 3409 ರನ್‌ ಗಳಿಸಿದ್ದಾರೆ. ಕ್ರೀಡಾಂಗಣವೊಂದರಲ್ಲಿ ಅತಿಹೆಚ್ಚು ಟಿ20 ರನ್‌ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವಿರಾಟ್‌ ಮೊದಲ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಮುಷ್ಫಿಕುರ್‌ ರಹೀಂ, ಮೀರ್‌ಪುರದ ಶೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ 3239 ರನ್‌ ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌, ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ನಲ್ಲಿ 3036 ರನ್‌ ಕಲೆಹಾಕಿ, 3ನೇ ಸ್ಥಾನ ಪಡೆದಿದ್ದಾರೆ.

ಇದೇ ವೇಳೆ, ಕ್ರೀಡಾಂಗಣವೊಂದರಲ್ಲಿ ಅತಿ ಹೆಚ್ಚು ಟಿ20 ಶತಕ ಸಿಡಿಸಿದವರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಮೀರ್‌ಪುರದ ಕ್ರೀಡಾಂಗಣದಲ್ಲಿ ಗೇಲ್‌ 5 ಶತಕ ಬಾರಿಸಿದ್ದಾರೆ.ಈ ಐಪಿಎಲ್‌ನಲ್ಲಿ ಕೊಹ್ಲಿ 37 ಸಿಕ್ಸರ್‌!

ವಿರಾಟ್‌ ಕೊಹ್ಲಿ ಈ ಐಪಿಎಲ್‌ನಲ್ಲಿ ಒಟ್ಟು 37 ಸಿಕ್ಸರ್‌ ಸಿಡಿಸಿದ್ದು, ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ವಿರಾಟ್‌ ಒಟ್ಟು 455 ಎಸೆತಗಳಲ್ಲಿ 37 ಸಿಕ್ಸರ್‌ ಚಚ್ಚಿದ್ದಾರೆ. ಲಖನೌ ತಂಡದ ನಿಕೋಲಸ್‌ ಪೂರನ್‌ ಕೇವಲ 280 ಎಸೆತಗಳಲ್ಲಿ 36 ಸಿಕ್ಸರ್‌ ಬಾರಿಸಿ 2ನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್‌ನ ಅಭಿಷೇಕ್‌ ಶರ್ಮಾ 195 ಎಸೆತಗಳಲ್ಲೇ 35 ಸಿಕ್ಸರ್‌ ಸಿಡಿಸಿದ್ದಾರೆ.700+ ರನ್‌: ಗೇಲ್‌ ದಾಖಲೆ ಸರಿಗಟ್ಟಿದ ಕೊಹ್ಲಿ

ಐಪಿಎಲ್‌ ಆವೃತ್ತಿಯೊಂದರಲ್ಲಿ ವಿರಾಟ್‌ ಕೊಹ್ಲಿ 2ನೇ ಬಾರಿಗೆ 700ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. ಇದರೊಂದಿಗೆ ಕ್ರಿಸ್‌ ಗೇಲ್‌ರ ದಾಖಲೆಯನ್ನು ಸರಿಗಟ್ಟಿದ್ದಾರೆ. 2016ರಲ್ಲಿ ದಾಖಲೆಯ 973 ರನ್‌ ಕಲೆಹಾಕಿದ್ದ ಕೊಹ್ಲಿ, ಈ ವರ್ಷ 708 ರನ್‌ ಗಳಿಸಿದ್ದಾರೆ. ಕ್ರಿಸ್‌ ಗೇಲ್‌ 2012ರಲ್ಲಿ 733, 2013ರಲ್ಲಿ 708 ರನ್‌ ಕಲೆಹಾಕಿದ್ದರು.